ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಜಟಾಪಟಿ ಈಗ ತಾರ್ಕಿಕ ಅಂತ್ಯದತ್ತ ಸಾಗಿದೆ. ರೈತರ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದ್ದ ಕುಮಾರಸ್ವಾಮಿ ಸವಾಲನ್ನು ಸಿಎಂ ಡಿ.ಕೆ. ಶಿವಕುಮಾರ್ ಸ್ವೀಕರಿಸಿದ್ದಾರೆ. ಈ ಕುರಿತು ಎಚ್‌ಡಿಕೆಗೆ ಮೊದಲ ಬಾರಿಗೆ ಅಧಿಕೃತ ಪತ್ರ ಬರೆದಿರುವ ಸಿಎಂ, ಚರ್ಚೆಯ ಸ್ಥಳ ಮತ್ತು ಸಮಯವನ್ನು ನಿಗದಿಪಡಿಸಿ ಕಚೇರಿಗೆ ಬರುವಂತೆ ಆಹ್ವಾನಿಸಿದ್ದಾರೆ.
ಪತ್ರದಲ್ಲೇನಿದೆ? ಸ್ಥಳ, ದಿನಾಂಕ ಫಿಕ್ಸ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರೆದಿರುವ ಅಧಿಕೃತ ಪತ್ರದಲ್ಲಿ, ನೀವು ಆರಂಭಿಸಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ನಿಮ್ಮೊಂದಿಗೆ ಮುಖಾಮುಖಿ ಚರ್ಚಿಸಲು ನಾನು ಸಿದ್ಧನಿದ್ದೇನೆ. ಬರುವ ಜೂನ್ 26ರಂದು ಬೆಳಗ್ಗೆ 11:00 ಗಂಟೆಗೆ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ನಿಮ್ಮ 5 ಜನ ಪ್ರತಿನಿಧಿಗಳೊಂದಿಗೆ ಆಗಮಿಸಬೇಕು ಎಂದು ವಿನಂತಿಸಿದ್ದಾರೆ.
ಸವಾಲು-ಪ್ರತಿಸವಾಲುಗಳ ಹಿನ್ನೆಲೆ:
ಕಳೆದ ಕೆಲವು ದಿನಗಳಿಂದ ಇಬ್ಬರು ನಾಯಕರ ನಡುವೆ ಬಿಡದಿ ಯೋಜನೆಗೆ ಸಂಬಂಧಿಸಿದಂತೆ ಭಾರಿ ವಾಗ್ದಾಳಿ ನಡೆದಿತ್ತು. “ನಾನಂತೂ ಫ್ರೀ ಇದ್ದೇನೆ, ರೈತರ ಭೂಮಿ ಕಸಿದುಕೊಳ್ಳಲು ಬಿಡುವುದಿಲ್ಲ, ಚರ್ಚೆಗೆ ನೀವೇ ದಿನಾಂಕ ನಿಗದಿಪಡಿಸಿ ನಾನು ಬರುತ್ತೇನೆ” ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್, “ಈ ಯೋಜನೆಯ ಅಸಲಿ ಪಿತಾಮಹ ಕುಮಾರಸ್ವಾಮಿ ಅವರೇ. ಅವರು ಈ ಹಿಂದೆ 40% ಭೂಮಿ ಕೊಡುವುದಾಗಿ ಹೇಳಿದ್ದರು, ನಾವು ರೈತರಿಗೆ ಶೇ.50 ರಷ್ಟು ಭೂಮಿ ನೀಡಲು ಮುಂದಾಗಿದ್ದೇವೆ. ರಾಜಕೀಯಕ್ಕಾಗಿ ಇದನ್ನು ವಿರೋಧಿಸಲಾಗುತ್ತಿದೆ” ಎಂದು ತಿರುಗೇಟು ನೀಡಿದ್ದರು.
ಇದನ್ನೂ ಓದಿ:
ಇಡೀ ರಾಜ್ಯದ ಕಣ್ಣು ಜೂನ್ 26ರ ಭೇಟಿಯತ್ತ:
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎಚ್.ಡಿ. ಕುಮಾರಸ್ವಾಮಿಗೆ ಬರೆದಿರುವ ಮೊದಲ ಪತ್ರ ಇದಾಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಾರ್ವಜನಿಕ ವೇದಿಕೆಯಲ್ಲಿ ಸವಾಲು ಹಾಕಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಸಿಎಂ ನೀಡಿದ ಈ ಅಧಿಕೃತ ಆಹ್ವಾನವನ್ನು ಒಪ್ಪಿಕೊಂಡು ಜೂನ್ 26 ರಂದು ವಿಧಾನಸೌಧಕ್ಕೆ ಆಗಮಿಸಲಿದ್ದಾರೆಯೇ ಎಂಬುದನ್ನು ಇಡೀ ರಾಜ್ಯವೇ ಎದುರುನೋಡುತ್ತಿದೆ.



