June 22, 2026
Monday, June 22, 2026
spot_img

ಸ್ವಂತ ಮನೆ ಮಾಲೀಕರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್: OC ಇಲ್ಲದಿದ್ದರೂ ಸಿಗಲಿದೆ ಶಾಶ್ವತ ವಿದ್ಯುತ್ ಸಂಪರ್ಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸ್ವಂತ ಮನೆ ನಿರ್ಮಿಸಿಕೊಂಡು, ಸ್ವಾಧೀನಾನುಭವ ಪ್ರಮಾಣಪತ್ರ (OC) ಸಿಗದೆ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಪರದಾಡುತ್ತಿದ್ದ ಸಾವಿರಾರು ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕಟ್ಟಡ ಪೂರ್ಣಗೊಂಡಿದ್ದರೂ ಒಸಿ ವಿಳಂಬದಿಂದಾಗಿ ವಿದ್ಯುತ್ ವಂಚಿತರಾಗಿದ್ದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇಂಧನ ಇಲಾಖೆಯ ಮೂಲಕ ಒಸಿ ನಿಯಮ ಸಡಿಲಿಸಿ ಜೂನ್ 22ರ ಇಂದು ಆದೇಶ ಪ್ರಕಟಿಸಿದೆ.

ಯಾರೆಲ್ಲಾ ಈ ವಿನಾಯಿತಿಗೆ ಅರ್ಹರು?

ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ಕೆಳಕಂಡ ಕಟ್ಟಡಗಳ ಮಾಲೀಕರು ಒಸಿ ಇಲ್ಲದೆಯೇ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅರ್ಹರಾಗಿರುತ್ತಾರೆ. 2,400 ಚದರ ಅಡಿ ವಿಸ್ತೀರ್ಣದವರೆಗೆ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಅನ್ವಯಿಸುತ್ತದೆ.

ನೆಲಮಹಡಿ ಸಹಿತ ಮೂರು ಅಂತಸ್ತು (Ground + 3 floors) ಅಥವಾ ತಳಮಹಡಿ ಪಾರ್ಕಿಂಗ್ ಸಹಿತ ನಾಲ್ಕು ಮಹಡಿಗಳವರೆಗಿನ (Stilt + 4 floors) ವಸತಿ ಕಟ್ಟಡಗಳು ಒಸಿ ವಿನಾಯಿತಿ ವ್ಯಾಪ್ತಿಗೆ ಬರಲಿವೆ. ಮೇ 31, 2026ರ ಒಳಗೆ ನಿರ್ಮಾಣ ಕಾರ್ಯ ಸಂಪೂರ್ಣ ಪೂರ್ಣಗೊಂಡಿರುವ ವಾಸದ ಮನೆಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಈಗಾಗಲೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಅಥವಾ ಯಾವುದೇ ಸಂಪರ್ಕ ಇಲ್ಲದೆ ಕಾಮಗಾರಿ ಮುಗಿಸಿರುವ ಮನೆಗಳು ಇದರ ಸೌಲಭ್ಯ ಪಡೆಯಬಹುದು.

ಗ್ರಾಮೀಣ ಪ್ರದೇಶ ಮತ್ತು ರೈತರಿಗೆ ವಿಶೇಷ ಸವಲತ್ತು

ಗ್ರಾಮೀಣ ಭಾಗದ ಜನರಿಗೆ ಮತ್ತು ಕೃಷಿಕರಿಗೆ ನೆರವಾಗಲು ಸರ್ಕಾರ ಮತ್ತೊಂದು ಪ್ರಮುಖ ವಿನಾಯಿತಿ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆಗಳು, ದನದ ಕೊಟ್ಟಿಗೆಗಳು, ರೇಷ್ಮೆ ಸಾಕಾಣಿಕೆ ಮನೆ ಹಾಗೂ ಕೃಷಿ ಪೂರಕ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ (OC) ನಿಯಮದಿಂದ ಸಂಪೂರ್ಣ ವಿನಾಯಿತಿ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಕೇವಲ 15 ದಿನಗಳ ಗಡುವು!

ಇದು ಒನ್-ಟೈಮ್ ಸೆಟಲ್ಮೆಂಟ್ ಆಗಿರುವುದರಿಂದ ಸಾರ್ವಜನಿಕರು ತಕ್ಷಣವೇ ಇದರ ಸದುಪಯೋಗ ಪಡೆದುಕೊಳ್ಳಬೇಕು. ಆದೇಶ ಹೊರಬಿದ್ದ ಇಂದಿನಿಂದ ಅಂದರೆ ಜೂನ್ 22, 2026 ರಿಂದ ಮುಂದಿನ 15 ದಿನಗಳವರೆಗೆ ಮಾತ್ರ ಹೊಸದಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ:

ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು

ದುರುಪಯೋಗ ತಡೆಯಲು ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಅರ್ಜಿ ಸಲ್ಲಿಸುವ ಮನೆ ಮಾಲೀಕರು ಕಡ್ಡಾಯವಾಗಿ ತಮ್ಮ ಕಟ್ಟಡದ ಇತ್ತೀಚಿನ ಛಾಯಾಚಿತ್ರಗಳು ಮತ್ತು ಜಿಪಿಎಸ್ ಆಧಾರಿತ ಲೊಕೇಶನ್ ವಿವರಗಳನ್ನು ಅಧಿಕಾರಿಗಳಿಗೆ ಒದಗಿಸಬೇಕಾಗುತ್ತದೆ. ಎಸ್ಕಾಂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಸಂಪರ್ಕ ಮಂಜೂರು ಮಾಡಲಾಗುತ್ತದೆ.

ಅಧಿಕಾರಶಾಹಿ ವಿಳಂಬ ಹಾಗೂ ಕಚೇರಿಗಳ ಅಲೆದಾಟ ತಪ್ಪಿಸಲು ಸರ್ಕಾರ ತಂದಿರುವ ಈ ಐತಿಹಾಸಿಕ ಸುಧಾರಣೆಗೆ ಸಾರ್ವಜನಿಕ ವಲಯ ಹಾಗೂ ಮಧ್ಯಮ ವರ್ಗದ ಮನೆ ಮಾಲೀಕರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !