June 24, 2026
Wednesday, June 24, 2026
spot_img

CR7 World Record: ಟೀಕಿಸಿದವರ ಬಾಯಿ ಮುಚ್ಚಿಸಿ, ಸತತ 6 ವಿಶ್ವಕಪ್‌ಗಳಲ್ಲಿ ಗೋಲು ಹೊಡೆದ ಜಗದೇಕ ವೀರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್‌ಬಾಲ್ ಸಾಮ್ರಾಜ್ಯದ ಬಾದ್‌ಷಾ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ವಿರುದ್ಧದ ಪಂದ್ಯದಲ್ಲಿ ಫ್ಲಾಪ್ ಆಗಿ ಟೀಕೆಗೆ ಒಳಗಾಗಿದ್ದ ರೊನಾಲ್ಡೊ, ಇದೀಗ ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ಉಜ್ಬೇಕಿಸ್ತಾನ್ ವಿರುದ್ಧ ರೊನಾಲ್ಡೊ ಡಬಲ್ ಧಮಾಕಾ!

ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಪೋರ್ಚುಗಲ್ ಪರ ಆಡಿದ ರೊನಾಲ್ಡೊ, ಪಂದ್ಯದ 6ನೇ ನಿಮಿಷದಲ್ಲೇ ಮೊದಲ ಗೋಲು ಬಾರಿಸಿದರು. ಬಳಿಕ 39ನೇ ನಿಮಿಷದಲ್ಲಿ ಸಹ ಆಟಗಾರ ಬ್ರೂನೋ ಫೆರ್ನಾಂಡಿಸ್ ನೀಡಿದ ಪಾಸ್ ಅನ್ನು ಅದ್ಭುತ ಸ್ಲೈಡ್ ಶಾಟ್ ಮೂಲಕ ಗೋಲಾಗಿ ಪರಿವರ್ತಿಸಿದರು. ಈ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು (10 ಗೋಲು) ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಲಿಯೋನೆಲ್ ಮೆಸ್ಸಿ ದಾಖಲೆ ಉಡೀಸ್!

ಈ ಪಂದ್ಯದ ಮೂಲಕ ರೊನಾಲ್ಡೊ ವಿಶ್ವಕಪ್ ಇತಿಹಾಸದಲ್ಲೇ ಸತತ 6 ಆವೃತ್ತಿಗಳಲ್ಲಿ ಗೋಲು ಬಾರಿಸಿದ ಜಗತ್ತಿನ ಏಕೈಕ ಆಟಗಾರ ಎಂಬ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 6 ವಿಶ್ವಕಪ್ ಆಡಿದ್ದರೂ, 2010 ರಲ್ಲಿ ಗೋಲು ಗಳಿಸಲು ವಿಫಲರಾಗಿದ್ದರು. ಆದರೆ ಸಿಆರ್7 ಈ ಮೈಲಿಗಲ್ಲು ತಲುಪಿದ್ದಾರೆ.

ರೊನಾಲ್ಡೊ ಗೋಲ್ಡನ್ ಜರ್ನಿ (2006-2026)

ರೊನಾಲ್ಡೊ ಈ ಹಿಂದೆ 2006, 2010, 2014, 2018 ಮತ್ತು 2022ರ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ್ದರು. ಇದೀಗ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ 2026ರ ಫಿಫಾ ವಿಶ್ವಕಪ್‌ನಲ್ಲೂ ಗೋಲು ಖಾತೆ ತೆರೆಯುವ ಮೂಲಕ ಫುಟ್‌ಬಾಲ್ ಜಗತ್ತಿನ ಅಧಿಪತಿ ತಾನೇ ಎಂಬುದನ್ನು ಸಾಬೀತುಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !