June 24, 2026
Wednesday, June 24, 2026
spot_img

ವಿಷಪೂರಿತ ಹಾವು ಕಚ್ಚಿ 12 ವರ್ಷದ ಬಾಲಕನ ದಾರುಣ ಸಾ*ವು

ಹೊಸದಿಗಂತ ವರದಿ ಉತ್ತರ ಕನ್ನಡ:

ವಿಷಪೂರಿತ ಹಾವು ಕಚ್ಚಿ 12 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಸಮೀಪದ ಸಹಸ್ರಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ.

6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಿಥುನ್ ಪುಟ್ಟಪ್ಪ ನಾಯ್ಕ (12) ಮೃತ ಬಾಲಕ. ಆತನ ಸಹೋದರಿ ದೀಕ್ಷಾಳಿಗೂ ಹಾವು ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮೃತ ಬಾಲಕ ಮಿಥುನ್ ಮತ್ತು ಸಹೋದರಿ ದೀಕ್ಷಾ ಮಂಗಳವಾರ ರಾತ್ರಿ ಊಟ ಮುಗಿಸಿ ತಂದೆಯೊಂದಿಗೆ ಮನೆಯಲ್ಲೇ ಮಲಗಿದ್ದರು. ಮುಂಜಾನೆ ವೇಳೆ ಇಬ್ಬರೂ ಏಕಾಏಕಿ ವಾಂತಿ ಮಾಡತೊಡಗಿದ್ದಾರೆ. ಇದನ್ನು ಗಮನಿಸಿದ ಪೋಷಕರು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಕಂಡಿದ್ದಾರೆ.

ಇದನ್ನೂ ಓದಿ:

ಈ ವೇಳೆ ಮನೆಯೊಳಗಿಂದ ಹಾವೊಂದು ಹೊರಗೆ ಹೋಗಿರುವುದನ್ನು ಗಮನಿಸಿದ್ದು, ಮಕ್ಕಳಿಗೆ ಹಾವು ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಇಬ್ಬರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಿಥುನ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ದೀಕ್ಷಾ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆ.

ವೈದ್ಯರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಿಥುನ್‌ನ ಕಿವಿಗೆ ಹಾಗೂ ದೀಕ್ಷಾಳ ಕೈ ಬೆರಳಿಗೆ ವಿಷಪೂರಿತ ಹಾವು ಕಚ್ಚಿರುವುದು ದೃಢಪಟ್ಟಿದೆ. ಘಟನೆ ಕುರಿತು ಮಾಹಿತಿ ಪಡೆದ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಾಂತೇಶ ಕುಂಬಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !