June 24, 2026
Wednesday, June 24, 2026
spot_img

ಹಿಂಡಾಲ್ಕೋ ಕಂಪನಿ ಆವರಣದಲ್ಲಿ ಯುವ ಕಾರ್ಮಿಕ ಆತ್ಮಹ*ತ್ಯೆ: ಆಕ್ರೋಶಗೊಂಡ ಜನರಿಂದ ಕಲ್ಲು ತೂರಾಟ

ಹೊಸದಿಗಂತ ವರದಿ ಬೆಳಗಾವಿ:

ಇಲ್ಲಿನ ಪ್ರಸಿದ್ಧ ಹಿಂಡಾಲ್ಕೋ ಕಂಪನಿ ಆವರಣದಲ್ಲಿ ಯುವ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಈ ಘಟನೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಕಂಪನಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮೃತ ಯುವಕನನ್ನು ಶಂಕರ್ ತಳವಾರ (24) ಎಂದು ಗುರುತಿಸಲಾಗಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಂಕರ್, ಕೆಲ ದಿನಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ವಾಟ್ಸಾಪ್ ಸ್ಟೇಟಸ್ನಲ್ಲಿ ಡೆತ್ ನೋಟ್:

ಆತ್ಮಹತ್ಯೆಗೂ ಮುನ್ನ ಶಂಕರ್ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ಮಾದರಿಯ ಸಂದೇಶವೊಂದನ್ನು ಪ್ರಕಟಿಸಿದ್ದಾನೆ ಎಂದು ತಿಳಿದುಬಂದಿದೆ. ಆ ಸಂದೇಶದಲ್ಲಿ ಕಂಪನಿಯಲ್ಲಿ ಹಳೆಯ ಕಾರ್ಮಿಕರನ್ನು ತೆಗೆದು ಹೊಸ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಗುತ್ತಿಗೆದಾರ ಪೈಯಾಲ್ ನಂದಿ ಅವರಿಂದ ತನಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.

ಕೆಲಸ ಮುಂದುವರಿಸಬೇಕಾದರೆ ₹5 ಲಕ್ಷ ಹಣ ನೀಡುವಂತೆ ಗುತ್ತಿಗೆದಾರರು ಒತ್ತಾಯಿಸಿದ್ದರು ಎಂದು ಶಂಕರ್ ತನ್ನ ಸಂದೇಶದಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಬಡ ಕುಟುಂಬದ ಹಿನ್ನೆಲೆಯುಳ್ಳ ಶಂಕರ್ಗೆ ಅಷ್ಟು ದೊಡ್ಡ ಮೊತ್ತದ ಹಣ ಒದಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ತನ್ನ ಉದ್ಯೋಗ ಕಳೆದುಕೊಳ್ಳುವ ಭೀತಿ ಮತ್ತು ಮಾನಸಿಕ ಕಳವಳಕ್ಕೆ ಒಳಗಾಗಿದ್ದ ಆತ ಕೊನೆಗೆ ಜೀವನ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜನರ ಆಕ್ರೋಶ:

ಶಂಕರ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಮುತ್ತ್ಯಾನಟ್ಟಿ ಗ್ರಾಮದ ನಿವಾಸಿಗಳು, ಮೃತನ ಸ್ನೇಹಿತರು ಹಾಗೂ ನೂರಾರು ಸಂಖ್ಯೆಯ ಸಂಬಂಧಿಕರು ಹಿಂಡಾಲ್ಕೋ ಕಂಪನಿ ಎದುರು ಜಮಾಯಿಸಿದರು. ಗುತ್ತಿಗೆದಾರ ಹಾಗೂ ಕಂಪನಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಂತರ ಕಂಪನಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು.

ಕಲ್ಲು ತೂರಾಟದಿಂದ ಕಂಪನಿಯ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಕೆಲ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಅಧಿಕಾರಿಗಳ ಭೇಟಿ, ಮನವೊಲಿಕೆ ಯತ್ನ:

ಘಟನೆಯ ತೀವ್ರತೆಯನ್ನು ಗಮನಿಸಿದ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಹಾಗೂ ಸ್ಥಳೀಯ ಶಾಸಕ ಆಸೀಫ್ ಸೇಠ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪರಿಸ್ಥಿತಿ ಶಮನಗೊಳಿಸಲು ಪ್ರಯತ್ನಿಸಿದರು.

ಇದನ್ನೂ ಓದಿ:

ಜಿಲ್ಲಾಧಿಕಾರಿಗಳ ಪರಿಶೀಲನೆ:

ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸಂಬಂಧಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಿಂಡಾಲ್ಕೋ ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸುವ ಕುರಿತು ಹಾಗೂ ಪ್ರಕರಣದ ಸಮಗ್ರ ತನಿಖೆ ನಡೆಸುವ ಕುರಿತು ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಗಿ ಪೊಲೀಸ್ ಬಂದೋಬಸ್ತ್:

ಪ್ರಸ್ತುತ ಹಿಂಡಾಲ್ಕೋ ಕಂಪನಿ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ಈ ಘಟನೆಯು ಕಾರ್ಮಿಕರ ಹಕ್ಕುಗಳು, ಗುತ್ತಿಗೆ ಪದ್ಧತಿ ಹಾಗೂ ಉದ್ಯೋಗ ಭದ್ರತೆ ಕುರಿತಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮೃತ ಯುವಕನ ಸಾವಿಗೆ ನ್ಯಾಯ ಸಿಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !