ಹೊಸದಿಗಂತ ವರದಿ ಬೆಳಗಾವಿ:
ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರಿಗೆ ಸಂಬಂಧಿಸಿದ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಒಟ್ಟು ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿಯಾಗಿರುವ ವೈ. ಮಂಜುನಾಥ್ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯ ಹನುಮಾನ್ ನಗರದಲ್ಲಿರುವ ವೈ. ಮಂಜುನಾಥ್ ಅವರ ಐಷಾರಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದರು. ಇದೇ ವೇಳೆ ಅವರಿಗೆ ಸಂಬಂಧಿಸಿದ ಇನ್ನೂ ಐದು ಕಚೇರಿಗಳು ಮತ್ತು ನಿವಾಸಗಳ ಮೇಲೂ ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ದಾಳಿಯ ವೇಳೆ ಕಾಗದಪತ್ರಗಳು, ಬ್ಯಾಂಕ್ ಖಾತೆಗಳ ವಿವರಗಳು, ಆಸ್ತಿ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬೆಳಗಾವಿ, ಮೈಸೂರು, ಬೆಂಗಳೂರು ಹಾಗೂ ಹಾಸನ ಜಿಲ್ಲೆಯ ಅರಸಿಕೇರೆಯಲ್ಲಿ ಇರುವ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಮಂಜುನಾಥ್ ಅವರ ಆಪ್ತರು ಮತ್ತು ಸ್ನೇಹಿತರಿಗೆ ಸಂಬಂಧಿಸಿದ ಮನೆಗಳಲ್ಲಿಯೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಮೈಸೂರಿನಲ್ಲಿರುವ ಸ್ನೇಹಿತರ ನಿವಾಸ, ಬೆಂಗಳೂರಿನ ಅಪಾರ್ಟ್ಮೆಂಟ್, ಅರಸಿಕೇರೆಯಲ್ಲಿರುವ ಆಪ್ತನ ಮನೆ ಹಾಗೂ ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಮತ್ತೊಬ್ಬ ಸ್ನೇಹಿತನ ನಿವಾಸವೂ ಇಡಿ ತನಿಖೆಯ ವ್ಯಾಪ್ತಿಗೆ ಒಳಪಟ್ಟಿವೆ. ಬೆಂಗಳೂರಿನಲ್ಲಿರುವ ವೈ. ಮಂಜುನಾಥ್ ಅವರ ನಿವಾಸದಲ್ಲಿಯೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ವೈ. ಮಂಜುನಾಥ್ ವಿರುದ್ಧ ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿ, ಬಾರ್ ಹಾಗೂ ರೆಸ್ಟೋರೆಂಟ್ ಮೂಲಕ ಅಕ್ರಮ ಆಸ್ತಿ ಸಂಪಾದನೆ ನಡೆಸಿರುವ ಆರೋಪಗಳು ಕೇಳಿಬಂದಿವೆ. ಈ ಆರೋಪಗಳ ಹಿನ್ನೆಲೆ ಇಡಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯದೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ 10ಕ್ಕೂ ಹೆಚ್ಚು ಸಶಸ್ತ್ರ ಅರೆಸೇನಾ ಪಡೆ ಸಿಬ್ಬಂದಿಯ ಭದ್ರತೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮನೆಯ ಪ್ರಮುಖ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ, ಕುಟುಂಬ ಸದಸ್ಯರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಮಾಹಿತಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇಡಿ ದಾಳಿಯ ನಿಖರ ಕಾರಣ ಹಾಗೂ ತನಿಖೆಯ ವ್ಯಾಪ್ತಿ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆ ಇದೆ.



