June 25, 2026
Thursday, June 25, 2026
spot_img

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬ್ರಾಹ್ಮಿ ಹೇಗೆಲ್ಲ ಉಪಯೋಗಿಸಬಹುದು? ವೈದ್ಯರು ಹೇಳ್ತಾರೆ ಕೇಳಿ

ಮಳೆಗಾಲ ಆರಂಭವಾಗಿದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಮ್ಮ ಸುತ್ತಮುತ್ತಲಲ್ಲೇ ಅನೇಕ ಗಿಡಮೂಲಿಕೆಗಳಿವೆ ಅಂತ ನಮಗೇ ಗೊತ್ತಿರುವುದಿಲ್ಲ. ಇದರ ಪೈಕಿ ಒಂದು ಬ್ರಾಹ್ಮಿ. ಇದರ ಉಪಯೋಗ ಹೇಗೆ ಎಂಬ ಬಗ್ಗೆ ನಮ್ಮ ಒದುಗರಿಗೆ ಸವಿವರವಾಗಿ ಹೇಳಿದ್ದಾರೆ ಡಾ. ಶ್ರೇಯಶ್ರೀ ಅವರು…

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬ್ರಾಹ್ಮಿ ಹೇಗೆಲ್ಲ ಉಪಯೋಗಿಸಬಹುದು?

ಮಳೆಗಾಲವು ಪ್ರಕೃತಿಗೆ ತಂಪನ್ನು ನೀಡುವ ಋತುವಾದರೂ, ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಹಲವು ಕಾಯಿಲೆಗಳು ಈ ಕಾಲದಲ್ಲಿ ಸಾಮಾನ್ಯವಾಗಿ ಉಲ್ಬಣಿಸುತ್ತದೆ. ಮಳೆಗಾಲವು ಪ್ರಕೃತಿ ಹಾಗೂ ಮನುಷ್ಯನ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತದೆ. ಗ್ರೀಷ್ಮ ಕಾಲದ ಸುಡು ಬಿಸಿಲಿಗೆ ಮಳೆಗಾಲದ ತಂಪು ಆಹಾ ಎನಿಸಿದರೂ ಈ ಋತುವಿನಲ್ಲಿ ಜೀರ್ಣಶಕ್ತಿಯು ವಿಷಮಾವಸ್ಥೆಗೆ ಬರುವುದಲ್ಲದೆ, ದೇಹದ ರೋಗನಿರೋಧಕ ಶಕ್ತಿಯು ಕ್ಷೀಣಿಸುತ್ತದೆ. ಹಾಗಾಗಿ ಮಳೆಗಾಲ ಬಂತೆಂದರೆ, ಶೀತ, ಜ್ವರ, ಕೆಮ್ಮು, ವೈರಾಣುವಿನ ರೋಗಗಳು ಹಾಗೂ ಅಲರ್ಜಿಗಳು ಸಾಮಾನ್ಯವಾಗಿ ಹೆಚ್ಚುತ್ತದೆ. ಹಾಗಾಗಿ ಈ ಋತುವಿನಲ್ಲಿ ಹಳ್ಳಿಗಳಲ್ಲಿ ಪಥ್ಯಾಹಾರ ಸೇವಿಸುವುದು ರೂಢಿಯಾಗಿದೆ. ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುವುದಲ್ಲದೆ, ಮಳೆಗಾಲದ ಸಾಮಾನ್ಯ ಕಾಯಿಲೆಗಳಿಂದಲೂ ದೂರವಿರಬಹುದು. ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳಲ್ಲಿ ಬ್ರಾಹ್ಮಿ (Bacopa monnieri) ಪ್ರಮುಖ ಸ್ಥಾನವನ್ನು ಪಡೆದಿದೆ. ಬ್ರಾಹ್ಮಿಯನ್ನು ಸ್ಥಳಿಯ ಭಾಷೆಯಲ್ಲಿ ಒಂದೆಲಗ ಅಥವ ತಿಮರೆ ಎಂದು ಕರೆಯುತ್ತಾರೆ.

ಸಣ್ಣ ಗಿಡಮೂಲಿಕೆಯಾದ ಬ್ರಾಹ್ಮಿಯು, ಕರಾವಳಿ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಇದು ಸ್ಮರಣಶಕ್ತಿ, ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಸಿದ್ಧವಾಗಿದ್ದು, ಇದರಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳೂ ಇವೆ.

ರೋಗನಿರೋಧಕ ಶಕ್ತಿಯ ಮೇಲೆ ಬ್ರಾಹ್ಮಿಯ ಪರಿಣಾಮ:

ಆ್ಯಂಟಿಆಕ್ಸಿಡೆಂಟ್ ಗುಣಗಳು:

ರೋಗನಿರೋಧಕ ಶಕ್ತಿ ಕಡಿಮೆಯಾದಾಗ ದೇಹದಲ್ಲಿ ಅಸ್ಥಿರ, ಹಾನಿಕಾರಕ ಅಮ್ಲಜನಕ ಅಣುಗಳು ಉತ್ಪತ್ತಿಯಾಗತ್ತದೆ. ಇದರಿಂದ ಜೀವಕೋಶಗಳು ಕ್ರಮೇಣ ಹಾನಿಯಾಗುತ್ತದೆ. ಇದನ್ನು ಆಕ್ಸಿಡೇಟಿವ್ ಸ್ಟ್ರೆಸ್ ಎಂದು ಕರೆಯುತ್ತಾರೆ. ಬ್ರಾಹ್ಮಿಯಲ್ಲಿ ಸಕ್ರಿಯವಾಗಿ ಇರುವ ಬಾಕೋಸೈಡ್ ಎಂಬ ರಾಸಾಯಾನಿಕ ಈ ಹಾನಿಕಾರಕ ಅಣುಗಳನ್ನು ನಾಶಮಾಡುತ್ತದೆ.

ಉರಿಯೂತ ನಿವಾರಣೆ:

ಬ್ರಾಹ್ಮಿಯಲ್ಲಿ ಇರುವ ಶೀತ ಗುಣವು ಪಿತ್ತಕ್ಕೆ ಸಂಬಂಧಪಟ್ಟ ಕಾಯಲೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಇದರಿಂದ ದೇಹದಲ್ಲಿನ ಉರಿಯೂತ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮಳೆಗಾಲದ ಸಾಮಾನ್ಯ ಸಮಸ್ಯೆಗಳು:

ಮಳೆಗಾಲದಲ್ಲಿ ವಾತ ಪ್ರಕೋಪದಿಂದ ಉಂಟಾಗುವ ದೇಹದ ದಣಿವು, ಅನಿದ್ರೆ, ತಲೆನೋವು, ಅಜೀರ್ಣ, ಮಲಬದ್ಧತೆ, ಏಕಾಗ್ರತೆಯ ಕೊರತೆಯಂತ ಸಮಸ್ಯೆಗಳನ್ನು ಬ್ರಾಹ್ಮಿ ನಿವಾರಿಸುತ್ತದೆ.

ಮಳೆಗಾಲದಲ್ಲಿ ಬ್ರಾಹ್ಮಿಯನ್ನು ಹೇಗೆ ಉಪಯೋಗಿಸಬಹುದು?

ಬ್ರಾಹ್ಮಿಯ ರಸ :
ತಾಜಾ ಬ್ರಾಹ್ಮಿ ಎಲೆಗಳನ್ನು ತೊಳೆದು ಅದರ 10-15 ಮಿ.ಲಿ. ರಸ ತೆಗೆದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಮೆದುಳಿನ ಕಾರ್ಯಕ್ಷಮತೆ ಉತ್ತಮವಾಗುತ್ತದೆ ಹಾಗು ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ.

ಬ್ರಾಹ್ಮಿ ಚೂರ್ಣ:
ಬ್ರಾಹ್ಮಿ ಎಲೆಗಳನ್ನು ಚೆನ್ನಾಗಿ ಒಣಗಿಸಿ ಸುಮಾರು 2-3 ಗ್ರಾಂ ಹುಡಿಯನ್ನು ತುಪ್ಪ ಅಥವ ಜೇನುತುಪ್ಪದೊಂದಿಗೆ ಸೇವಿಸಬಹುದು.

ಬ್ರಾಹ್ಮಿ ತಂಬುಳಿ:
ದೇಹಕ್ಕೆ ತಂಪು ನೀಡುವ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆ ತಂಬುಳಿ. ಬ್ರಾಹ್ಮಿ ಎಲೆಯನ್ನ ವಿವಿಧ ಮಸಾಲೆಗಳಾದ ಜೀರಿಗೆ, ಶುಂಠಿ, ಮೆಣಸು ತುಪ್ಪದಲ್ಲಿ ಹುರಿದು, ತೆಂಗಿನಕಾಯಿಯ ತುರಿಯೊಂದಿಗೆ ನುಣ್ಣಗೆ ಮಾಡಿ ಅದಕ್ಕೆ ಮಜ್ಜಿಗೆ ಸೇರಿಸಿ, ಸಾಸಿವೆ, ಜೀರಿಗೆ ಕರಿಬೇವಿನ ಒಗ್ಗರಣೆ ನೀಡಿದರೆ ತಂಬುಳಿ ಸಿದ್ಧ. ಇದು ಅಜೀರ್ಣ, ಭೇಧಿ, ಜಠರದ ಉರಿಯೂತ ನಿವಾರಣೆ ಮಾಡುತ್ತದೆ.

ಬ್ರಾಹ್ಮಿ ಚಟ್ನಿ :
ತೊಳೆದ ಬ್ರಾಹ್ಮಿ ಸೊಪ್ಪನ್ನು, ತೆಂಗಿನಕಾಯಿ, ಹಸಿಮೆಣಸಿನಕಾಯಿ, ಶುಂಠಿ, ಹುಣಿಸೇಹಣ್ಣು, ಬೆಲ್ಲ, ಉಪ್ಪು ಮತ್ತು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಗಂಜಿ ಅಥವ ಅನ್ನದೊಂದಿಗೆ ಬೆರೆಸಿ ಊಟ ಮಾಡಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಮಳೆಗಾಲದಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಗಳಿಗೆ ಇದು ಪರಿಹಾರವಾದರೂ, ವೈದ್ಯರ ಸಲಹೆಯನ್ನು ಬಳಸುವುದು ಉತ್ತಮ.

ಡಾ. ಶ್ರೇಯಶ್ರೀ. ಎನ್. ಎಂ.ಡಿ (ಆಯು)
ಲೇಖಕರು ಉಡುಪಿ ಕುತ್ಪಾಡಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸಾ ವಿಭಾಗದಲ್ಲಿ ಸಹಾಯಕ ಪ್ರಧ್ಯಾಪಕರು.



Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !