August 12, 2026
Wednesday, August 12, 2026
spot_img

ಸುಡಾನ್‌ನಲ್ಲಿ ಮತ್ತೆ ಭುಗಿಲೆದ್ದ ಆತಂಕ; ಪ್ರಮುಖ ನಗರಗಳ ಮೇಲೆ ಭೀಕರ ಡ್ರೋನ್ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು (ಬುಧವಾರ) ಮುಂಜಾನೆ ಸುಡಾನ್ ರಾಜಧಾನಿ ಖಾರ್ಟೂಮ್ ಮತ್ತು ಉತ್ತರದ ಎರಡು ಪ್ರಮುಖ ನಗರಗಳ ಮೇಲೆ ಭೀಕರ ಡ್ರೋನ್ ದಾಳಿಗಳು ನಡೆದಿವೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ರಾಜಧಾನಿಯಲ್ಲಿ ನೆಲೆಸಿದ್ದ ಶಾಂತ ವಾತಾವರಣದ ಬೆನ್ನಲ್ಲೇ ಈ ದಾಳಿಯನ್ನು ನಡೆಸಲಾಗಿದೆ.

ಈ ಅಂತರ್ಯುದ್ಧದ ಹಿನ್ನೆಲೆ

ಏಪ್ರಿಲ್ 2023 ರಿಂದ ಸುಡಾನ್ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ ಸುಡಾನ್ ಸೇನೆ ಮತ್ತು ಅವರ ಮಾಜಿ ಉಪನಾಯಕ ಮೊಹಮ್ಮದ್ ಹಮ್ದಾನ್ ಡಾಗ್ಲೋ ನೇತೃತ್ವದ ‘ರ‍್ಯಾಪಿಡ್ ಸಪೋರ್ಟ್ ಫೋರ್ಸಸ್’ (RSF) ಅರೆಸೇನಾ ಪಡೆಯ ನಡುವೆ ಭೀಕರ ಅಧಿಕಾರ ಯುದ್ಧ ನಡೆಯುತ್ತಿದೆ.

ಕಳೆದ ವರ್ಷ ಸುಡಾನ್ ಸೇನೆಯು ರಾಜಧಾನಿ ಖಾರ್ಟೂಮ್ ಅನ್ನು ತನ್ನ ವಶಕ್ಕೆ ಪಡೆದ ನಂತರ ಸುಮಾರು 23 ಲಕ್ಷಕ್ಕೂ ಹೆಚ್ಚು ಜನರು ಮರಳಿ ತಮ್ಮ ಮನೆಗಳಿಗೆ ಬಂದಿದ್ದರು. ಈ ಹಿಂದೆಯೂ ಇಲ್ಲಿ ಡ್ರೋನ್ ದಾಳಿಗಳು ನಡೆದಿದ್ದರೂ, ಕಳೆದ ಹಲವು ತಿಂಗಳುಗಳಿಂದ ನಗರದಲ್ಲಿ ಶಾಂತಿ ನೆಲೆಸಿತ್ತು.

ಮುಂಜಾನೆ 5 ಗಂಟೆಗೆ ನಡುಗಿದ ನಗರಗಳು

ಇಂದು ಮುಂಜಾನೆ ಸುಮಾರು 5 ಗಂಟೆಯ ಸುಳಿಯಲ್ಲಿ ಒಮ್ದುರ್ಮನ್ ನಗರದ ಉತ್ತರಕ್ಕಿರುವ ಸೇನೆಯ ಪ್ರಮುಖ ‘ವಾಡಿ ಸೀದ್ನಾ’ (Wadi Seidna) ನೆಲೆಯ ಕಡೆಯಿಂದ ಡ್ರೋನ್ ದಾಳಿ ನಡೆದಿದ್ದು, ಅದರ ವಿರುದ್ಧ ವಿಮಾನ ವಿರೋಧಿ ಕ್ಷಿಪಣಿಗಳನ್ನು ಉಡಾಯಿಸುವ ಭಾರೀ ಶಬ್ದ ಕೇಳಿಬಂದಿದೆ.

ಮತ್ತೊಂದೆಡೆ, ಸೇನೆಯ ನಿಯಂತ್ರಣದಲ್ಲಿರುವ ಉತ್ತರದ ಪ್ರಮುಖ ನಗರಗಳಾದ ಅತ್ಬರಾ ಮತ್ತು ಎಲ್-ದಾಮರ್ ನಗರಗಳ ಆಕಾಶದಲ್ಲೂ ಡ್ರೋನ್‌ಗಳು ಹಾರಾಟ ನಡೆಸಿರುವುದು ಮತ್ತು ಸ್ಫೋಟದ ಶಬ್ದಗಳು ಕೇಳಿಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಪ್ರಸಕ್ತ ಈ ದಾಳಿಗಳಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.

ವಿಶ್ವದ ಅತಿ ದೊಡ್ಡ ಮಾನವೀಯ ಬಿಕ್ಕಟ್ಟು

ವಿಶ್ವಸಂಸ್ಥೆಯು (UN) ಇದನ್ನು ʼಕ್ರೌರ್ಯದ ಯುದ್ಧʼ ಎಂದು ಕರೆದಿದ್ದು, ದೇಶಾದ್ಯಂತ ಈ ಸಂಘರ್ಷದಲ್ಲಿ ಇದುವರೆಗೆ 2,00,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಭೀಕರ ಯುದ್ಧವು ವಿಶ್ವದ ಅತಿ ದೊಡ್ಡ ಹಸಿವು ಮತ್ತು ನಿರಾಶ್ರಿತರ ಬಿಕ್ಕಟ್ಟಿಗೆ ಕಾರಣವಾಗಿದೆ.

ಅಧಿಕಾರಕ್ಕಾಗಿ ಭೀಕರ ಹೋರಾಟಕ್ಕೆ ಇಳಿದು ಶತ್ರುಗಳಾಗಿ ಬದಲಾಗಿರುವ ಬುರ್ಹಾನ್ ಮತ್ತು ಡಾಗ್ಲೋ, ಯುದ್ಧಭೂಮಿಯಲ್ಲಿ ನಿರ್ಣಾಯಕ ಜಯ ಸಾಧಿಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಮಾತುಕತೆಗೆ ಇಬ್ಬರೂ ಒಪ್ಪದ ಕಾರಣ ಈ ಯುದ್ಧವು ಯಾವುದೇ ತೀರ್ಮಾನವಿಲ್ಲದೆ ಮುಂದುವರಿದಿದೆ.

ಆರ್‌ಎಸ್‌ಎಫ್ ಪಡೆಯಿಂದ ದಾಳಿಯ ಭೀತಿ

ಕಳೆದ ವರ್ಷ ಪಶ್ಚಿಮದ ಬೃಹತ್ ಪ್ರದೇಶವಾದ ದಾರ್ಫರ್ ಮೇಲೆ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದ್ದ ಆರ್‌ಎಸ್‌ಎಫ್ (RSF) ಪಡೆ, ಆ ಬಳಿಕ ದಕ್ಷಿಣದ ಕೊರ್ಡೊಫಾನ್ ಪ್ರದೇಶ ಮತ್ತು ಆಗ್ನೇಯದ ಇಥಿಯೋಪಿಯಾ ಗಡಿಯುದ್ದಕ್ಕೂ ತನ್ನ ನೆಲೆಯನ್ನು ವಿಸ್ತರಿಸಲು ಮುಂದಾಗಿದೆ.

ಇದನ್ನೂ ಓದಿ:

ಆದರೆ, ಸುಡಾನ್ ಸೇನೆಯು ದೇಶದ ಮಧ್ಯ, ಉತ್ತರ ಮತ್ತು ಪೂರ್ವ ಭಾಗಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಕಳೆದ ತಿಂಗಳು ರಾಜಧಾನಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಿಂದ ಆರ್‌ಎಸ್‌ಎಫ್ ಪಡೆಯನ್ನು ಹಿಮ್ಮೆಟ್ಟಿಸುವ ಮೂಲಕ ಸೇನೆಯು ಕೊರ್ಡೊಫಾನ್‌ನಲ್ಲಿ ದೊಡ್ಡ ಜಯ ಗಳಿಸಿತ್ತು.

ಈ ಸೋಲಿನ ಬೆನ್ನಲ್ಲೇ ಆರ್‌ಎಸ್‌ಎಫ್ ಕಮಾಂಡರ್ ಡಾಗ್ಲೋ, ಈಗಾಗಲೇ ಜನಾಂಗೀಯ ಮಾರಣಹೋಮ ಸೇರಿದಂತೆ ಹಲವು ಯುದ್ಧ ಅಪರಾಧಗಳ ಆರೋಪ ಎದುರಿಸುತ್ತಿರುವ ತನ್ನ ಸೈನಿಕರನ್ನು ಮುಕ್ತವಾಗಿ ಬಿಡುವುದಾಗಿ ಎಚ್ಚರಿಸಿದ್ದನು. ಅಂದಿನಿಂದ ಆತನ ಪಡೆಗಳು ಸತತವಾಗಿ ದೊಡ್ಡ ಮಟ್ಟದ ಸೇಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಲೇ ಬಂದಿದ್ದು, ಇಂದಿನ ದಾಳಿಯು ಅದರದ್ದೇ ಭಾಗ ಇರಬಹುದು ಎಂದು ಶಂಕಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !