September 2, 2026
Wednesday, September 2, 2026
spot_img

‘ಅಮಿತ್ ಶಾ ಭಾಷಣ ನಮಗೆ ಬೇಡ’: ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ರಾಹುಲ್ ಗಾಂಧಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೀಟ್ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ವಿಷಯ ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಇಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚರ್ಚೆಯ ಪ್ರಸ್ತಾಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ಅಮಿತ್ ಶಾ ಸವಾಲು:

ಸಂಸತ್ತಿನ ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಸರ್ಕಾರ ಯಾವುದನ್ನೂ ಮುಚ್ಚಿಡುತ್ತಿಲ್ಲ. ವಿರೋಧ ಪಕ್ಷಗಳು ಸ್ಪೀಕರ್ ಅವರಿಗೆ ಪತ್ರ ನೀಡಲಿ, ನಾನು ಇಂದು ಮಧ್ಯಾಹ್ನ 3 ಗಂಟೆಯಿಂದ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸತತ 24 ಗಂಟೆಗಳ ಕಾಲ ಸಂಸತ್ತಿನಲ್ಲಿ ಕುಳಿತು ಪ್ರತಿ ಪ್ರಶ್ನೆಗೂ ಉತ್ತರಿಸಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದರು.

ರಾಹುಲ್ ಗಾಂಧಿ ಟೀಕೆ:

ಅಮಿತ್ ಶಾ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳಿಗೆ ಅಮಿತ್ ಶಾ ಅವರಿಂದ ಉಪನ್ಯಾಸ ಕೇಳುವ ಆಸಕ್ತಿ ಇಲ್ಲ. ದೇಶದ ಯುವ ಪೀಳಿಗೆಗೆ ಉತ್ತರ ಬೇಕಾಗಿದೆ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದು ಯಾರು? ಮೊಳೆಗಳಿದ್ದ ಲಾಠಿಗಳಿಂದ ವಿದ್ಯಾರ್ಥಿಗಳನ್ನು ಹೊಡೆಯಲು ಆದೇಶ ನೀಡಿದ್ದು ಯಾರು? ಒಂದು ವೇಳೆ ಅಮಿತ್ ಶಾ ಅವರೇ ಈ ಆದೇಶ ನೀಡಿದ್ದರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಸರ್ಕಾರದ ನಿಲುವು

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ವಿದ್ಯಾರ್ಥಿಗಳ ಚಳವಳಿ ಕುರಿತು ಸುದೀರ್ಘ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ ಗೃಹ ಸಚಿವರು ಉತ್ತರಿಸುವಾಗ ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ವಿನಂತಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !