June 25, 2026
Thursday, June 25, 2026
spot_img

ಮಾವು ಬೆಳೆಗಾರರ ಕಣ್ಣೀರಿಗೆ ಕರಗಿದ ಕೇಂದ್ರ, ತೋತಾಪುರಿ ಬೆಳೆಗೆ ಸಹಾಯಧನ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿ ರಾಜ್ಯದಲ್ಲಿನ ಹವಾಮಾನ ವೈಪರೀತ್ಯ, ಬೆಲೆ ಕುಸಿತದಿಂದಾಗಿ ಕರ್ನಾಟಕದ ತೋತಾಪುರಿ ಮಾವು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದರು. ಆದರೆ ಇವರ ಸಮಸ್ಯೆಗಳನ್ನು ಅರಿತ ಕೇಂದ್ರ ಸರ್ಕಾರ ರಾಜ್ಯ ತೋತಾಪುರಿ ಮಾವು ಬೆಳೆಗಾರರಿಗೆ ಸಹಾಯಧನ ಘೋಷಿಸಿದೆ.

ರೈತರ ಸಂಕಷ್ಟದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ನೇರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಗಮನಸೆಳೆದಿದ್ದರು. ಜೋಶಿ ಬರೆದ ಪತ್ರಕ್ಕೆ ಸ್ಪಂದಿಸಿ ಸಹಾಯಧನ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಜೋಶಿ ಮಾಹಿತಿ ನೀಡಿದ್ದು, ಬೆಲೆ ಕೊರತೆ ಪಾವತಿ ಯೋಜನೆ ಅಡಿಯಲ್ಲಿ ಬೆಂಬಲ ನೀಡುವಂತೆ ನಾನು ಮನವಿ ಮಾಡಿದ್ದೆ. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ ₹1,750 ರೈತರಿಗೆ ಸಹಾಯಧನವನ್ನು ನೀಡಲು ಅನುಮೋದನೆ ನೀಡಿದ್ದಾರೆ.

ರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ನಿರ್ಧಾರವು ಸಾವಿರಾರು ರೈತ ಕುಟುಂಬಗಳಿಗೆ ನೆರವಾಗಲಿದ್ದು, ಅವರ ಆರ್ಥಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್‌ಗೆ ಕರ್ನಾಟಕ ರೈತರ ಪರವಾಗಿ ಧನ್ಯವಾದಗಳು ಎಂದು ಜೋಶಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿಯಂತಹ ಜಿಲ್ಲೆಗಳಲ್ಲಿ ಸಾವಿರಾರು ರೈತ ಕುಟುಂಬಗಳು ಮಾವು ಕೃಷಿಯನ್ನು ಅವಲಂಬಿಸಿದೆ. ಮಾವನ್ನೇ ನೆಚ್ಚಿಕೊಂಡಿರುವ ರೈತ ಕುಟುಂಬಗಳು ಮಾವು ಬೆಲೆ ಕುಸಿತದಿಂದ ಸಾಲಗಾರರಾಗುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರದ ಸಹಾಯಧನ ಘೋಷಣೆಯಿಂದ ರಾಜ್ಯದ ಮಾವು ರೈತರಿಗೆ ರಿಲೀಫ್ ಸಿಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !