June 25, 2026
Thursday, June 25, 2026
spot_img

ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ಬಿಗ್ ಶಾಕ್; ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಾವಣಗೆರೆಯ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ಆಘಾತ ನೀಡಿದೆ. ಅಪ್ರಾಪ್ತ ಬಾಲಕರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಗಂಭೀರ ಪೋಕ್ಸೋ (POCSO) ಪ್ರಕರಣದಲ್ಲಿ ಸ್ವಾಮೀಜಿ ಅವರಿಗೆ ಕೆಳ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್ ಅಧಿಕೃತವಾಗಿ ರದ್ದುಗೊಳಿಸಿದೆ.

ಹೈಕೋರ್ಟ್ ಗರಂ:

ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ಈ ಮಹತ್ವದ ಆದೇಶ ಹೊರಡಿಸಿದೆ. ಮೇ 7ರಂದು ಅಧಿಕೃತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಒಂದು ದಿನ ಮುಂಚಿತವಾಗಿ, ಅಂದರೆ ಮೇ 6ರಂದೇ ದಾವಣಗೆರೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು. ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಪೀಠ, “ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟ ವಿಧಾನ ಸರಿಯಲ್ಲ ಮತ್ತು ಇದು ಆಘಾತಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟಿದೆ.  

ಹೊಸದಾಗಿ ಜಾಮೀನು ಪಡೆಯಲು 3 ವಾರಗಳ ಗಡುವು

ನಿರೀಕ್ಷಣಾ ಜಾಮೀನು ರದ್ದುಪಡಿಸಿರುವ ಹೈಕೋರ್ಟ್, ಸ್ವಾಮೀಜಿಗೆ ತಕ್ಷಣವೇ ಬಂಧನವಾಗದಂತೆ ತಾತ್ಕಾಲಿಕ ರಿಲೀಫ್ ನೀಡಿದೆ. ವಿಚಾರಣಾ ನ್ಯಾಯಾಲಯದಿಂದ ಹೊಸದಾಗಿ ನಿಯಮಿತ ಜಾಮೀನು ಕಾಯ್ದಿರಿಸಿಕೊಳ್ಳಲು ಅಥವಾ ಪಡೆದುಕೊಳ್ಳಲು 3 ವಾರಗಳ ಕಾಲಾವಕಾಶವನ್ನು ನೀಡಿದೆ. ಅಲ್ಲಿಯವರೆಗೆ ಕಾನೂನು ರಕ್ಷಣೆ ಮುಂದುವರಿಯಲಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ;

 “ಯಾವ ವಚನವನ್ನೂ ನೀಡಬೇಡಿ, ಸುಮ್ಮನಿದ್ದುಬಿಡಿ!”

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸ್ವಾಮೀಜಿ ಕಡೆಯವರು ಸಾಕ್ಷಿಗಳಿಗೆ ಮತ್ತು ದೂರುದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಮತ್ತೊಂದು ಪ್ರಕರಣವೂ ದಾಖಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸ್ವಾಮೀಜಿ ಪರ ವಕೀಲರಿಗೆ ವಚನಾನಂದರು ಈಗ ಯಾವುದೇ ವಚನವನ್ನೂ ನೀಡಬಾರದು. ಸುಮ್ಮನೆ ಇದ್ದುಬಿಡಲು ಹೇಳಿ ಎಂದು ಖಾರವಾಗಿ ಸಲಹೆ ನೀಡಿದ್ದಾರೆ. ಈಗಿನ ದಿನಗಳಲ್ಲಿ ಸಣ್ಣ ಬಾಲಕರೂ ಸಹ ಸುರಕ್ಷಿತವಾಗಿಲ್ಲ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !