ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಾಕ್ಯಾ ದೇವಿಯ ದರುಶನಕ್ಕಾಗಿ ಗಂಟೆಗಟ್ಟಲೆ ಕಾದು ನಿಂತಿದ್ದ ಭಕ್ತರು ಹೆಣ್ಣಿನ ಮೇಲೆ ದೌರ್ಜನ್ಯ ಎಸಗಿದ್ದಾರೆ. ದೂರದಲ್ಲಿರುವ ದೇವಿಯನ್ನು ಪೂಜಿಸುವ ಭಕ್ತರು ಪಕ್ಕದಲ್ಲೇ ಇರುವ ಹೆಣ್ಣಿಗೆ ಗೌರವ ನೀಡಲು ಸೋತಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಸ್ಥಾನದ ಆವರಣದಲ್ಲಿ ಯುವತಿಯ ಮೇಲೆ ನೀರಿನ ಬಾಟಲಿಗಳನ್ನು ಎಸೆದು, ಹೀಯಾಳಿಸಿರುವ ಘಟನೆ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ವಾರ್ಷಿಕ ‘ಅಂಬುಬಾಚಿ ಮೇಳ’ ನಡೆಯುತ್ತಿರುವುದರಿಂದ ಕಾಮಾಕ್ಯ ದೇವಾಲಯದಲ್ಲಿ ಭಕ್ತರ ಭಾರಿ ಜನಸಂದಣಿ ಇತ್ತು. ಈ ತೀವ್ರ ಜನದಟ್ಟಣೆಯ ನಡುವೆ ಸಿಲುಕಿದ್ದ ಯುವತಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ತಕ್ಷಣವೇ ಆಕೆ ತನ್ನ ಸ್ನೇಹಿತ ಜನಸಂದಣಿಯಿಂದ ಪಾರಾಗಿ ಸುರಕ್ಷಿತ ಜಾಗಕ್ಕೆ ಹೋಗಲು ಆವರಣದಿಂದ ಹೊರನಡೆಯಲು ಪ್ರಯತ್ನಿಸಿದ್ದಾಳೆ. ಇಬ್ಬರು ಜನಸಂದಣಿಯಿಂದ ಹೊರಬರುತ್ತಿರುವುದನ್ನು ನೋಡಿದ ಗುಂಪಿನಲ್ಲಿದ್ದ ಕೆಲವು ಕಿಡಿಗೇಡಿಗಳು ಯಾವುದೇ ಕಾರಣವಿಲ್ಲದೆ ಅವರ ಮೇಲೆ ಕೂಗಾಡಿ ಹೀಯಾಳಿಸಲು ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಕೆಲವರು ಅವರ ಮೇಲೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಇದರಲ್ಲಿ ಒಂದು ನೀರಿನ ಬಾಟಲಿ ನೇರವಾಗಿ ಯುವತಿಗೆ ತಲೆಗೆ ಬಲವಾಗಿ ಬಡಿದಿದೆ. ನೋವು ತಾಳಲಾರದೆ ಆಕೆ ಕಣ್ಣೀರಿಟ್ಟಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವಸ್ಥಾನದ ಆವರಣದಲ್ಲಿ ಇವರ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಸಿಸಿಟಿವಿ ಮೂಲಕ ತಕ್ಷಣವೇ ಗುರುತಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಸ್ಸಾಂ ಸರ್ಕಾರ ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.



