August 19, 2026
Wednesday, August 19, 2026
spot_img

ಬೀಜಿಂಗ್‌ನಲ್ಲಿ ಭೀಕರ ದುರಂತ: 109 ಅಂತಸ್ತಿನ ಸ್ಕೈಸ್ಕ್ರೇಪರ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದೆ. ನಗರದ ಅತ್ಯಂತ ಎತ್ತರದ ಹೆಗ್ಗುರುತಾಗಿರುವ 109 ಅಂತಸ್ತಿನ ‘ಚೀನಾ ಜುನ್’ ಸ್ಕೈಸ್ಕ್ರೇಪರ್ ಕಟ್ಟಡಕ್ಕೆ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಇಡೀ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ವೈರಲ್ ಆದ ದೃಶ್ಯಗಳು ಹಾಗೂ ರಕ್ಷಣೆ

ಅಪಘಾತದ ತೀವ್ರತೆಗೆ ಕಟ್ಟಡದ ಮೇಲಿನ ಅಂತಸ್ತುಗಳಿಂದ ಅವಶೇಷಗಳು ಮತ್ತು ಗಾಜಿನ ತುಂಡುಗಳು ನೆಲಕ್ಕೆ ಬಿದ್ದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಫೋಟೋ ಹಾಗೂ ವಿಡಿಯೋಗಳು ಭಾರಿ ವೈರಲ್ ಆಗಿದ್ದು, ವಿಮಾನದ ಬಾಲದ ಭಾಗ ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಕಟ್ಟಡದಲ್ಲಿದ್ದ ನೂರಾರು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ದಾರಿ ತಪ್ಪಿದ ‘ಸನ್‌ವರ್ಡ್ ಎಸ್‌ಎ 60 ಎಲ್’

ಸ್ಥಳೀಯ ಕಂಪನಿಗೆ ಸೇರಿದ ಚೀನಾ ನಿರ್ಮಿತ ‘ಸನ್‌ವರ್ಡ್ ಎಸ್‌ಎ 60 ಎಲ್ ಅರೋರಾ’ ಎಂಬ ಲಘು ಕ್ರೀಡಾ ವಿಮಾನ ಇದಾಗಿದೆ. ಜಾಗತಿಕ ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ‘Flightradar24’ ಪ್ರಕಾರ, ಈ ವಿಮಾನವು ತನ್ನ ನಿಗದಿತ ಮಾರ್ಗದಿಂದ ಸಂಪೂರ್ಣವಾಗಿ ವಿಮುಖವಾಗಿ, ಅಸಾಮಾನ್ಯ ಮಾರ್ಗದಲ್ಲಿ ಚಲಿಸಿ ಈ ಅಪಘಾತಕ್ಕೀಡಾಗಿದೆ. ಬೀಜಿಂಗ್‌ನಲ್ಲಿ ಡ್ರೋನ್ ಮತ್ತು ಸಣ್ಣ ವಿಮಾನಗಳ ಹಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧವಿದ್ದರೂ ಈ ದುರಂತ ಸಂಭವಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !