ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ಗಾಳಿಗೆ ತೂರಿ, ಕೇವಲ ಪ್ರಚಾರಕ್ಕಾಗಿಯೇ ಮೂರು ವರ್ಷಗಳಲ್ಲಿ ಬರೊಬ್ಬರಿ 473 ಕೋಟಿ ರೂ. ತೆರಿಗೆದಾರರ ಹಣವನ್ನು ಪೋಲು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದ್ದು, ಸರ್ಕಾರದ ಅಸಲಿ ರಿಪೋರ್ಟ್ ಕಾರ್ಡ್ ಅಂದರೆ ಅದು “ಡೆವಲಪ್‌ಮೆಂಟ್ ಝೀರೋ, ಪಬ್ಲಿಸಿಟಿ ಹೀರೊ” ಎಂದು ಲೇವಡಿ ಮಾಡಿದ್ದಾರೆ.
ದಿನಕ್ಕೆ 43 ಲಕ್ಷಕ್ಕೂ ಅಧಿಕ ಜಾಹೀರಾತು ವೆಚ್ಚ
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ ಹಾಗೂ ಹದಗೆಟ್ಟ ಮೂಲಸೌಕರ್ಯಗಳಂತಹ ಗಂಭೀರ ಸಮಸ್ಯೆಗಳಿದ್ದರೂ, ಸರ್ಕಾರ ದಿನವೊಂದಕ್ಕೆ 43 ಲಕ್ಷಕ್ಕೂ ಹೆಚ್ಚು ಹಣವನ್ನು ಕೇವಲ ಜಾಹೀರಾತುಗಳಿಗಾಗಿ ಖರ್ಚು ಮಾಡುತ್ತಿದೆ. ಈ ಕೋಟಿ ಕೋಟಿ ಹಣವನ್ನು ರಸ್ತೆ ನಿರ್ಮಾಣ ಮಾಡಲು, ಉದ್ಯೋಗ ಸೃಷ್ಟಿಸಲು ಅಥವಾ ರೈತರಿಗೆ ನೆರವಾಗಲು ಬಳಸುತ್ತಿಲ್ಲ. ಬದಲಿಗೆ ಕೇವಲ ಮುಖ್ಯಮಂತ್ರಿಯವರ ಫೋಟೋ ಹಾಗೂ ಸರ್ಕಾರದ ಇಮೇಜ್ ಮ್ಯಾನೇಜ್‌ಮೆಂಟ್‌ಗಾಗಿ ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ
ಕಾಂಗ್ರೆಸ್ ತನ್ನ ದೊಡ್ಡ ಸಾಧನೆ ಎಂದು ಡಂಗುರ ಸಾರಿಕೊಳ್ಳುತ್ತಿರುವ ಗ್ಯಾರಂಟಿ ಯೋಜನೆಗಳು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಅನುಷ್ಠಾನದ ಸವಾಲುಗಳನ್ನು ಎದುರಿಸುತ್ತಿವೆ. ಜನರ ಸಂಕಷ್ಟಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸುವ ಬದಲು, ಸರ್ಕಾರಕ್ಕೆ ಕೇವಲ ತನ್ನ ಭರವಸೆಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ ಇರುವಂತೆ ಕಾಣುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಕೇಳಿದರೆ ಸರ್ಕಾರದ ಬಳಿ ‘ಆರ್ಥಿಕ ಮುಗ್ಗಟ್ಟು’ ಎಂಬ ಸಬೂಬು ಸಿದ್ಧವಿರುತ್ತದೆ, ಆದರೆ ಪ್ರಚಾರದ ವಿಷಯಕ್ಕೆ ಬಂದರೆ ಇವರ ಖಜಾನೆಗೆ ಮಿತಿಯೇ ಇಲ್ಲದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಜನರಿಗೆ ಬೇಕಿರುವುದು ರಸ್ತೆಗಳೇ ಹೊರತು ಸಿಎಂ ಫೋಟೋ ಅಲ್ಲ
ಬೆಂಗಳೂರಿನ ಹದಗೆಟ್ಟ ರಸ್ತೆಗಳ ಸ್ಥಿತಿಯೇ ಸರ್ಕಾರದ ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಜನರು ಪ್ರತಿದಿನ ಪತ್ರಿಕೆಯ ಮುಖಪುಟದಲ್ಲಿ ಮುಖ್ಯಮಂತ್ರಿಯವರ ಫೋಟೋ ನೋಡಲು ಬಯಸುತ್ತಿಲ್ಲ. ಬದಲಿಗೆ ತಮಗೆ ಉತ್ತಮ ರಸ್ತೆಗಳು, ಕೈಗೆಟುಕುವ ಜೀವನೋಪಾಯ, ಮಕ್ಕಳಿಗೆ ಉದ್ಯೋಗ, ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಹಾಗೂ ರೈತರಿಗೆ ನೈಜ ಬೆಂಬಲ ಸಿಗಲಿ ಎಂದು ಕಾಯುತ್ತಿದ್ದಾರೆ. ಬದಲಾವಣೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಜನರ ನಿರಾಸೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಇದನ್ನೂ ಓದಿ;
ಸಾರ್ವಜನಿಕರ ಹಣ ಜನರ ಕಲ್ಯಾಣಕ್ಕೆ ಬಳಕೆಯಾಗಬೇಕೇ ಹೊರತು ರಾಜಕೀಯ ಸ್ವಯಂ ಪ್ರಚಾರಕ್ಕಲ್ಲ ಎಂದಿರುವ ವಿಜಯೇಂದ್ರ, ಕರ್ನಾಟಕದ ಜನತೆಗೆ ಸದ್ಯ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಸರ್ಕಾರ ಬೇಡ, ನೆಲದ ಮೇಲೆ ಕೆಲಸ ಮಾಡುವ ಸರ್ಕಾರ ಬೇಕಿದೆ ಎಂದು ಕಿಡಿಕಾರಿದ್ದಾರೆ.



