June 27, 2026
Saturday, June 27, 2026
spot_img

ಪಾಕ್ ಕುತಂತ್ರಿ ಬುದ್ಧಿ ಮತ್ತೆ ಜಗಜ್ಜಾಹೀರು: ನಿಷೇಧಿತ ಉಗ್ರ ಸಂಘಟನೆಗಳ ಬಹಿರಂಗ ಓಡಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಇಸ್ಲಾಮಾಬಾದ್‌ನ H-8 ಸ್ಮಶಾನದಲ್ಲಿ ನಡೆದ ಅವರ ಅಂತ್ಯಕ್ರಿಯೆಯ (ಜನಾಜಾ) ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಸೃಷ್ಟಿಸಿವೆ. ಈ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ನಿಷೇಧಿತ ಉಗ್ರ ಸಂಘಟನೆ ‘ಲಷ್ಕರ್-ಎ-ತೈಬಾ’ ಹಾಗೂ ಅದರ ರಾಜಕೀಯ ಮುಖವಾಣಿಯಾದ ‘ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್’ ನಾಯಕರು ಬಹಿರಂಗವಾಗಿ ಭಾಗವಹಿಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಹಫೀಜ್ ಸಯೀದ್ ಆಪ್ತರ ಉಪಸ್ಥಿತಿ

ವೈರಲ್ ಆಗಿರುವ ವೀಡಿಯೋದಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ಎಲ್‌ಇಟಿ ಸ್ಥಾಪಕ ಹಫೀಜ್ ಸಯೀದ್‌ನ ಅತ್ಯಂತ ನಿಕಟವರ್ತಿಗಳು ಸರದಿಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ. PMML ನ ಇಸ್ಲಾಮಾಬಾದ್ ಮುಖ್ಯಸ್ಥ ಇನಾಮ್-ಉರ್-ರೆಹಮಾನ್ ಕಾಂಬೋಹ್, ಉಪ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ತೂರ್, ಮತ್ತು ವಲಯ ಪ್ರಧಾನ ಕಾರ್ಯದರ್ಶಿ ಹಫೀಜ್ ಉಮರ್ ಅವರಂತಹ ಪ್ರಮುಖರು ಈ ಅಂತ್ಯಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದರು.

ಪಾಕಿಸ್ತಾನದ ‘ಟೆರರ್ ಸೇಫ್ ಹೆವನ್’ ಪರ್ದೆಫಾಶ್!

ಭಯೋತ್ಪಾದಕ ಸಂಘಟನೆಗಳ ಮೇಲ್ವಿಚಾರಣೆ ನಡೆಸುವ ತಜ್ಞರ ಪ್ರಕಾರ, ಈ ವೀಡಿಯೋವನ್ನು ಸ್ವತಃ PMML ನ ಅಧಿಕೃತ ಮಾಧ್ಯಮ ವಿಭಾಗವೇ ಬಿಡುಗಡೆ ಮಾಡಿದೆ. ನಿಷೇಧಿತ ಸಂಘಟನೆಗಳ ಮುಖಂಡರು ರಾಜಧಾನಿ ಇಸ್ಲಾಮಾಬಾದ್‌ನಲ್ಲೇ ಯಾವುದೇ ಭಯವಿಲ್ಲದೆ, ರಾಜಾರೋಷವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಓಡಾಡುತ್ತಿರುವುದು ಪಾಕಿಸ್ತಾನವು ಉಗ್ರರಿಗೆ ಇಂದಿಗೂ ಸುರಕ್ಷಿತ ತಾಣವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರಿಗೆ ಈ ಉಗ್ರರ ಉಪಸ್ಥಿತಿಯೊಂದಿಗೆ ನೇರ ನಂಟಿದೆಯೇ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಈ ಘಟನೆ ನೆರೆಯ ದೇಶದ ಉಗ್ರ ಪೋಷಣೆಯ ಮುಖವಾಡವನ್ನು ಜಗತ್ತಿನ ಎದುರು ಕಳಚಿಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !