ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಬಳಿಯ ಸತ್ಯ ನಿಕೇತನದಲ್ಲಿ ನಡೆದ ಪಿಜಿ ಕಟ್ಟಡ ಕುಸಿತ ಪ್ರಕರಣದ ತನಿಖೆ ತೀವ್ರಗೊಂಡಿದೆ. ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಐದು ಅಂತಸ್ತಿನ ಬಾಯ್ಸ್ ಹಾಸ್ಟೆಲ್ ಕಟ್ಟಡ ಕುಸಿದುಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾ, ಪತ್ನಿ ಊರ್ಮಿಳಾ ಮತ್ತು ಮಗ ಮಹೇಶ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ
ದುರಂತದ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಎಂಸಿಡಿ, ದೆಹಲಿ ಪೊಲೀಸ್ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸುಮಾರು 50 ಯುವ ವಿದ್ಯಾರ್ಥಿಗಳು ವಾಸವಿದ್ದ ಇಂತಹ ಪಿಜಿಗಳಿಗೆ ಸೂಕ್ತ ಭದ್ರತಾ ತಪಾಸಣೆ ಇಲ್ಲದೆ ಅನುಮತಿ ನೀಡಿದ್ದು ಹೇಗೆ? ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಜೀವನದ ಹೊಸ್ತಿಲಲ್ಲಿದ್ದ ಯುವಕರ ಜೀವ ಹೋಗಿರುವುದಕ್ಕಿಂತ ದುಃಖದ ಸಂಗತಿ ಮತ್ತೊಂದಿಲ್ಲ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಹೊರರಾಜ್ಯದ ಎಷ್ಟು ವಿದ್ಯಾರ್ಥಿಗಳು ಇಲ್ಲಿ ತಂಗಿದ್ದಾರೆ ಎಂಬ ಮಾಹಿತಿ ನೀಡುವಂತೆ ದೆಹಲಿ ವಿಶ್ವವಿದ್ಯಾಲಯಕ್ಕೆ ಸೂಚಿಸಿ, 10 ದಿನಗಳ ಒಳಗೆ ವರದಿ ಸಲ್ಲಿಸಲು ಗಡುವು ನೀಡಿದೆ. ಮುಂದಿನ ವಿಚಾರಣೆಯನ್ನು ಸೆ. 25ಕ್ಕೆ ನಿಗದಿಪಡಿಸಿದೆ.
ಅಧಿಕಾರಿಗಳು ಸಸ್ಪೆಂಡ್
ಕಟ್ಟಡ ಕುಸಿತದ ಬೆನ್ನಲ್ಲೇ ಆಡಳಿತ ಮಂಡಳಿಯು ಮಹಾನಗರ ಪಾಲಿಕೆಯ (MCD) ಐದು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದು, ದಕ್ಷಿಣ ವಲಯದ ಡೆಪ್ಯುಟಿ ಕಮಿಷನರ್ ರಾಕೇಶ್ ಕುಮಾರ್, ಸೂಪರಿಂಟೆಂಡಿಂಗ್ ಇಂಜಿನಿಯರ್ ರಣವೀರ್ ಸಿಂಗ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಲಿತ್ ಕುಮಾರ್ ಗೋಯಲ್, ಅಸಿಸ್ಟೆಂಟ್ ಇಂಜಿನಿಯರ್ ಸುನಿಲ್ ಚೌಹಾಣ್ ಮತ್ತು ಜೂನಿಯರ್ ಇಂಜಿನಿಯರ್ ಆಶಿಶ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಇನ್ನು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ:
ಮುಂದುವರಿದ ರಕ್ಷಣಾ ಕಾರ್ಯಾಚರಣೆ
ದಶಕಗಳ ಹಳೆಯದಾದ ಈ ಕಟ್ಟಡ ಭಾನುವಾರ ಮಧ್ಯಾಹ್ನ 1:30 ರ ಸುಮಾರಿಗೆ ದಿಢೀರನೆ ಕುಸಿದುಬಿದ್ದಿತ್ತು. ಸದ್ಯಕ್ಕೆ 12 ಜನರನ್ನು ರಕ್ಷಿಸಲಾಗಿದ್ದು, 7 ಜನ ಸಾವನ್ನಪ್ಪಿದ್ದಾರೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿವೆ.
ಈ ದುರಂತದ ಬೆನ್ನಲ್ಲೇ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಹಾಗೂ ಪಿಜಿಯಾಗಿ ನಡೆಸುವ ಎಲ್ಲಾ ಹಳೆಯ ಕಟ್ಟಡಗಳ ಸುರಕ್ಷತೆಯ ತಪಾಸಣೆಗೆ ಹೊಸ ನೀತಿಯನ್ನು ಜಾರಿಗೆ ತಂದಿದೆ.



