June 27, 2026
Saturday, June 27, 2026
spot_img

ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ: ಜನಸೇವೆಯೇ ಶ್ರೇಷ್ಠ ಧರ್ಮ ಎಂದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈನ ಸಮುದಾಯದವರು ತಮ್ಮ ವ್ಯಾಪಾರ ವಹಿವಾಟಿನಲ್ಲಿ ಬರುವ ಲಾಭಾಂಶವನ್ನು ನೊಂದವರ, ಬಡವರ ಪರೋಪಕಾರಕ್ಕಾಗಿ ಬಳಸುತ್ತಿರುವುದು ಪುಣ್ಯದ ಕೆಲಸ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ದಿವಂಗತ ಬಬ್ಲಿಬಾಯಿ ಹಂಜಾರಿ ಮಲ್‌ಜಿ, ಚಿತ್ರದುರ್ಗ ಇವರ ಸ್ಮರಣಾರ್ಥ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಉಚಿತ ಮೆಗಾ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಅನುದಾನದಲ್ಲಿ ಇಲ್ಲಿಯವರೆಗೂ ಹದಿನಾರು ಸಾವಿರ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸಿದ್ದು, ತಾಲ್ಲೂಕಿನಾದ್ಯಂತ ಏಳು ಸಾವಿರ ಕನ್ನಡಕಗಳನ್ನು ವಿತರಿಸಲಾಗಿದೆ. ಪ್ರತಿ ವಾರ್ಡ್ ಹಾಗೂ ಪಂಚಾಯಿತಿ ಮಟ್ಟಗಳಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿಯೊಬ್ಬರಿಗೂ ಕಣ್ಣು ಅತ್ಯಂತ ಸೂಕ್ಷ್ಮವಾಗಿದ್ದು, ಜೋಪಾನ ಮಾಡಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಲಾಭಾಂಶವನ್ನು ಸಮಾಜಕ್ಕೆ ಧಾರೆ ಎರೆಯುವ ಕೆಲಸ ಮಾಡುವವರು ಜೈನ ಸಮುದಾಯದವರು. ದೊಡ್ಡ ದೊಡ್ಡ ಶ್ರೀಮಂತರಿದ್ದಾರೆ. ಎಲ್ಲರಿಗೂ ದಾನ ಮಾಡುವ ಮನಸ್ಸಿರುವುದಿಲ್ಲ. ಅವಕಾಶ ಸಿಕ್ಕಾಗ ಸಮಾಜ ಸೇವೆ ಮಾಡಿದರೆ ನೆನಪಿನಲ್ಲಿ ಉಳಿಯುತ್ತದೆ. ಹುಟ್ಟು-ಸಾವಿನ ಮಧ್ಯೆ ಏನು ಮಾಡುತ್ತಾರೆಂಬುದು ಮುಖ್ಯ. ಈ ಸಮುದಾಯದ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.

ಇದನ್ನೂ ಓದಿ:

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಾನವನ ದೇಹದಲ್ಲಿ ಅತ್ಯಂತ ಶ್ರೇಷ್ಟವಾದುದು ತಲೆ. ಅದರಲ್ಲಿ ಕಣ್ಣು ಪ್ರಧಾನವಾದುದು. ಮನುಷ್ಯನ ಜನ್ಮ ಸಾರ್ಥಕವಾಗಬೇಕಾದರೆ ಕಣ್ಣು ಬೇಕು. ಇದರಿಂದ ಜಗತ್ತನ್ನು ನೋಡಬಹುದು. ಜೈನ ಸಮುದಾಯ ಇಂತಹ ಸಮಾಜಮುಖಿ ಕೆಲಸಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಕೃತಕ ಕಾಲ ಜೋಡಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತ ಅಸಹಾಯಕರ ನೆರವಿಗೆ ನಿಲ್ಲುತ್ತಿದೆ. ಅಹಿಂಸಾವಾದಿಗಳಾಗಿರುವ ಇವರು ಗೋಶಾಲೆಯನ್ನು ತೆರೆದಿದ್ದಾರೆ. ಯಾವುದೇ ಪಕ್ಷವಾಗಲಿ ಜನಸೇವೆ ಮಾಡುವವರಿಗೆ ಸದಾ ಬೆಂಬಲವಿರುತ್ತದೆ ಎಂದು ಹೇಳಿದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ದಾನಕ್ಕೆ ಮತ್ತೊಂದು ಹೆಸರೆ ಜೈನ ಸಮುದಾಯದವರು ಕೋವಿಡ್ ಸೇರಿದಂತೆ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿಂತು ಬಡ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದುಂಟು. ಒಂದಲ್ಲ ಒಂದು ರೀತಿಯಲ್ಲಿ ಜನಸೇವೆಯಲ್ಲಿ ತೊಡಗಿರುವುದು ಇವರ ದೊಡ್ಡ ಗುಣ. ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ ಇವುಗಳು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.

ಡಾ.ಸೋಲಂಕಿ ಮಾತನಾಡಿ, ಇಲ್ಲಿಯವರೆಗೂ ಮೂರುವರೆ ಲಕ್ಷ ಜನರಿಗೆ ಆಪರೇಷನ್ ಮಾಡಿದ್ದೇವೆ. ಚಿತ್ರದುರ್ಗದಲ್ಲಿ ಮೂರು ಸಾವಿರ ಕಣ್ಣಿನ ಆಪರೇಷನ್ ಮಾಡಿದ್ದೇನೆ. 2021 ರಿಂದ ನಮ್ಮ ಸೇವೆ ಆರಂಭಗೊಂಡಿತು. ರಾಜ್ಯದ ೨೬ ಜಿಲ್ಲೆಗಳಲ್ಲಿ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ರಾಜಸ್ಥಾನ, ವಿದೇಶದಲ್ಲಿಯೂ ನಮ್ಮ ತಂಡದೊಂದಿಗೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆದಿದೆ ಎಂದರು.

ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಕಣ್ಣಿನ ದೃಷ್ಠಿ ಕಳೆದುಕೊಂಡರೆ ಪ್ರಪಂಚವೆ ಕತ್ತಲಾಗುತ್ತದೆ. ಜೈನ ಸಮುದಾಯದಿಂದ ಪ್ರತಿ ವರ್ಷವೂ ಇಂತಹ ಸಮಾಜ ಸೇವೆ ಮುಂದುವರೆಯಲಿ. ಸಾಮಾನ್ಯ ಜನರು ಉಡುಪಿ, ಚಿಕ್ಕಮಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿಯೂ ಸುಲಭವಾಗಿ ಬಡವರಿಗೆ ಚಿಕಿತ್ಸೆ ಸಿಗುವಂತಾಗಲಿ ಎಂದು ಸಲಹೆ ನೀಡಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಎಲ್.ಪಾಲಾಕ್ಷಯ್ಯ ಇವರುಗಳು ವೇದಿಕೆಯಲ್ಲಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !