ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ದಿನಗಳಾದ್ರೂ ಟ್ರೆಕ್ಕಿಂಗ್‌ಗೆಂದು ಶಿವಗಂಗೆ ಬೆಟ್ಟಕ್ಕೆ ಹೋಗಿದ್ದ ಟೆಕ್ಕಿ ಅದ್ವೈತ್ ಸುಳಿವೇ ಇಲ್ಲ!
ಆಗಸ್ಟ್ ಏಳರಂದು ಏಕಾಂಗಿಯಾಗಿ ಚಾರಣಕ್ಕೆ ಹೊರಟಿದ್ದ 31 ವರ್ಷದ ಟೆಕ್ಕಿ ಅದ್ವೈತ್ ಉಪಧ್ಯಾಯ ನಾಪತ್ತೆಯಾಗಿದ್ದಾರೆ. ಬೆಂಗಳೂರು ಪೊಲೀಸರು ಅದ್ವೈತ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಅವರು ಬದುಕಿದ್ದಾರೋ ಇಲ್ಲವೋ ಎನ್ನುವ ಮಾಹಿತಿ ಕೂಡ ಯಾರಿಗೂ ತಿಳಿದಿಲ್ಲ.
ಶಿವಗಂಗೆಯಲ್ಲಿ ಶವ ಪತ್ತೆ
ಶಿವಗಂಗೆ ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಇದು ಅದ್ವೈತ್ ಉಪಾಧ್ಯಾಯ ಅವರ ಮೃತದೇಹವೋ ಅಲ್ಲವೋ ಎನ್ನುವ ಮಾಹಿತಿ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತ ಪೊಲೀಸರು ಶಿವಗಂಗೆ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸರು ಹೇಳೋದೇನು?
ಬೆಂಗಳೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ್ ಮಾಹಿತಿ ನೀಡಿದ್ದು, ಅದ್ವೈತ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದಿದ್ದಾರೆ. ವೈಟ್‌ಫೀಲ್ಡ್‌ನ ಕಾಮರ್ಸ್ ಕಂಪನಿಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು. ಶಿವಗಂಗೆ ಬೆಟ್ಟ ಹತ್ತುತ್ತೀನಿ ಎಂದು ಸ್ನೇಹಿತರಿಗೆ ಹೇಳಿದ್ದಾರೆ. ಒಬ್ಬರೇ ಬಾಡಿಗೆ ಬೈಕ್ ಪಡೆದು ಬಂದಿದ್ದಾರೆ. ಕೆಳಗೆ ಬೈಕ್ ನಿಂತಿದೆ. ಸಿಸಿಟಿವಿಯಲ್ಲಿ ಅವರು ಬೆಟ್ಟ ಹತ್ತುತ್ತಿರುವುದು ಕಾಣಿಸಿದೆ. ಆದರೆ ಮೆಟ್ಟಿಲು ಹತ್ತಿ ಮೇಲೆ ಹೋಗುತ್ತಾ ಹೋಗುತ್ತಾ ಯಾವ ಕ್ಯಾಮರಾಗಳು ಇಲ್ಲದ ಕಾರಣ ಅವರು ಎಲ್ಲಿ ಹೋಗಿದ್ದಾರೆ ತಿಳಿಯುತ್ತಿಲ್ಲ.
ದರೋಡೆಕೋರರು ಅಪಹರಿಸಿದ್ರಾ?
ಒಬ್ಬಂಟಿಯಾಗಿ ಟ್ರೆಕ್ಕಿಂಗ್ ಮಾಡಿದ್ದ ಅದ್ವೈತ್‌ರನ್ನು ದರೋಡೆಕೋರರು ಕಿಡ್ನಾಪ್ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಶಿವಗಂಗೆ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಶೋಧ ಕಾರ್ಯಾಚರಣೆಗಾಗಿ ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಯ 70ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಪಾಧ್ಯಾಯ ಅವರ ಮೊಬೈಲ್ ಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಟ್ಟದ ಎತ್ತರದಲ್ಲಿ ಕುಸಿತ, ಕಾಲು ಜಾರಿ ಬೀಳುವ ಅಪಾಯ ಕೂಡ ಇರುವುದರಿಂದ ಈ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎಂದರು.
ಶಿವಗಂಗೆ ಬೆಟ್ಟದಿಂದ ಬಿದ್ದರೆ ಏನಾಗುತ್ತದೆ ಎಂದು ಸರ್ಚ್ ಮಾಡಿದ್ರು!
ಶಿವಗಂಗೆ ಬೆಟ್ಟಕ್ಕೆ ಬರುವ ಮುನ್ನ ಅದ್ವೈತ್ ಆ ಜಾಗದ ಬಗ್ಗೆ ಎಐನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಜಾಗದ ಬಗ್ಗೆ, ಟ್ರೆಕ್ಕಿಂಗ್ ಸಮಯದ ಬಗ್ಗೆ ಹಾಗೆಯೇ ಮೇಲಿನಿಂದ ಬಿದ್ದರೆ ಏನಾಗುತ್ತದೆ ಎನ್ನುವ ಬಗ್ಗೆಯೂ ಪ್ರಶ್ನೆ ಕೇಳಿದ್ದಾರೆ.



