June 28, 2026
Sunday, June 28, 2026
spot_img

ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಘಟನೆ: 1 ರನ್‌ನಿಂದಾಗಿ ಉಲ್ಟಾ ಆಯ್ತು ಅಭಿಷೇಕ್ ಶರ್ಮಾ ಅದೃಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳು ಅಚ್ಚರಿ ಪಡುವಂತಹ ಅಪರೂಪದ ಘಟನೆಯೊಂದು ನಡೆದಿದೆ. ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ‘ಫಿಫ್ಟಿ’ ದಾಖಲೆಯನ್ನು ಪಂದ್ಯದ ನಂತರ ಅಧಿಕೃತವಾಗಿ ರದ್ದುಗೊಳಿಸಲಾಗಿದೆ.

ಅರ್ಧಶತಕದ ಸಂಭ್ರಮ ಸಡಗರ

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನೀಡಿದ 183 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದ್ದರು. ತಮ್ಮ 19ನೇ ಎಸೆತದಲ್ಲಿ ಸಿಂಗಲ್ ರನ್ ಕದಿಯುವ ಮೂಲಕ ಅವರು ಅರ್ಧಶತಕ ಪೂರೈಸಿ ಸಂಭ್ರಮಿಸಿದ್ದರು. ಆದರೆ, ಮರು ಎಸೆತದಲ್ಲೇ ಅವರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

50 ರಿಂದ 49ಕ್ಕೆ ಕುಸಿದ ಸ್ಕೋರ್!

ಪಂದ್ಯ ಮುಗಿದ ಬಳಿಕ ಐಸಿಸಿ ಅಧಿಕಾರಿಗಳು ವಿಡಿಯೋ ಮರುಪರಿಶೀಲನೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪಂದ್ಯದ 2ನೇ ಓವರ್‌ನಲ್ಲಿ ಅಭಿಷೇಕ್ ಶಾರ್ಟ್ ಬಾಲ್ ಒಂದನ್ನು ಪುಲ್ ಮಾಡಲು ಯತ್ನಿಸಿದಾಗ, ಚೆಂಡು ಬ್ಯಾಟ್‌ಗೆ ತಗುಲದೆ ಥೈ ಪ್ಯಾಡ್‌ಗೆ ಬಡಿದು ಫೈನ್ ಲೆಗ್ ಕಡೆಗೆ ಹೋಗಿತ್ತು. ಮೈದಾನದಲ್ಲಿದ್ದ ಸ್ಕೋರರ್‌ಗಳು ಆರಂಭದಲ್ಲಿ ಇದನ್ನು ಅಭಿಷೇಕ್ ಖಾತೆಗೆ ರನ್ ಎಂದು ತಪ್ಪಾಗಿ ಸೇರಿಸಿದ್ದರು.

ತಾಂತ್ರಿಕ ಪರಿಶೀಲನೆಯಲ್ಲಿ ಆ ಒಂದು ರನ್ ಬ್ಯಾಟ್‌ನಿಂದ ಬಂದಿದ್ದಲ್ಲ, ಬದಲಿಗೆ ‘ಲೆಗ್ ಬೈ’ ಎಂದು ಸಾಬೀತಾಯಿತು. ಹೀಗಾಗಿ ತಂಡದ ಒಟ್ಟು ಸ್ಕೋರ್ ಬದಲಾಗದಿದ್ದರೂ, ಅಭಿಷೇಕ್ ವೈಯಕ್ತಿಕ ಸ್ಕೋರ್ ಅನ್ನು 50 ರಿಂದ 49 ರನ್‌ಗಳಿಗೆ ಪರಿಷ್ಕರಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !