ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ, 2026ರ ಫಿಫಾ ವಿಶ್ವಕಪ್ನಲ್ಲಿ ಜೋರ್ಡನ್ ವಿರುದ್ಧ ಭರ್ಜರಿ ಗೋಲು ಗಳಿಸುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯ ಸತತ 7 ಪಂದ್ಯಗಳಲ್ಲಿ ಗೋಲು ಬಾರಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಅನನ್ಯ ಕೀರ್ತಿಗೆ ಮೆಸ್ಸಿ ಭಾಜನರಾಗಿದ್ದಾರೆ.
ದಿಗ್ಗಜರ ದಾಖಲೆ ಉಡೀಸ್
ಈ ಹಿಂದೆ ಸತತ 6 ಪಂದ್ಯಗಳಲ್ಲಿ ಗೋಲು ಗಳಿಸಿದ್ದ ಫ್ರಾನ್ಸ್ನ ಜಸ್ಟ್ ಫಾಂಟೈನ್ ಹಾಗೂ ಬ್ರೆಜಿಲ್ನ ಜೈರ್ಜಿನ್ಹೋ ಅವರ ಜಂಟಿ ದಾಖಲೆಯನ್ನು 39 ವರ್ಷದ ಮೆಸ್ಸಿ ಬ್ರೇಕ್ ಮಾಡಿದ್ದಾರೆ. ಜೋರ್ಡನ್ ವಿರುದ್ಧದ ಪಂದ್ಯದ 80ನೇ ನಿಮಿಷದಲ್ಲಿ ಮೂಡಿಬಂದ ಅದ್ಭುತ ಫ್ರೀ-ಕಿಕ್ ಗೋಲು ಈ ಐತಿಹಾಸಿಕ ಸಾಧನೆಗೆ ಕಾರಣವಾಯಿತು.
ಸರ್ವಕಾಲಿಕ ಗರಿಷ್ಠ ಸ್ಕೋರರ್
ಈ ನೂತನ ಗೋಲಿನೊಂದಿಗೆ ವಿಶ್ವಕಪ್ನಲ್ಲಿ ಮೆಸ್ಸಿ ಅವರ ಒಟ್ಟು ಗೋಲುಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇದರೊಂದಿಗೆ, ಬ್ರೆಜಿಲ್ನ ಮಹಿಳಾ ಆಟಗಾರ್ತಿ ಮಾರ್ಟಾ ಅವರ ಹೆಸರಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿ, ಪುರುಷರ ಮತ್ತು ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ‘ಸರ್ವಕಾಲಿಕ ಗರಿಷ್ಠ ಸ್ಕೋರರ್’ ಆಗಿ ಲಿಯೋನೆಲ್ ಮೆಸ್ಸಿ ಹೊರಹೊಮ್ಮಿದ್ದಾರೆ.
ರೌಂಡ್-32 ಗೆ ಅರ್ಜೆಂಟೀನಾ ಲಗ್ಗೆ
ಮೆಸ್ಸಿ ಅವರ ಈ ಸ್ಮರಣೀಯ ಪ್ರದರ್ಶನದ ಬಲದಿಂದ ಅರ್ಜೆಂಟೀನಾ ತಂಡವು ಪ್ರಸ್ತುತ ವಿಶ್ವಕಪ್ನ ರೌಂಡ್-32 ಹಂತಕ್ಕೆ ಯಶಸ್ವಿಯಾಗಿ ಅರ್ಹತೆ ಪಡೆದಿದೆ. ಜುಲೈ 4 ರಂದು ಮಿಯಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂದಿನ ನಾಕೌಟ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಕೇಪ್ ವರ್ಡೆ ತಂಡವನ್ನು ಎದುರಿಸಲಿದೆ.



