June 28, 2026
Sunday, June 28, 2026
spot_img

ಭಾರತದ ಹೆಮ್ಮೆಯ ‘ಗಗನಯಾನ’ಕ್ಕೆ ಮುಹೂರ್ತ ಫಿಕ್ಸ್: ಜಗತ್ತಿನ ಎದುರು ಹೊಸ ದಾಖಲೆ ಬರೆಯಲು ಇಸ್ರೋ ಸಜ್ಜು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಐತಿಹಾಸಿಕ ಕ್ಷಣಕ್ಕೆ ವೇದಿಕೆ ಸಿದ್ಧವಾಗಿದೆ. ಇಸ್ರೋ (ISRO) ಸಂಸ್ಥೆಯ ಮಹತ್ವಾಕಾಂಕ್ಷೆಯ ಸ್ವದೇಶಿ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆ ‘ಗಗನಯಾನ’ 2027ರ ವೇಳೆಗೆ ಸಾಕಾರಗೊಳ್ಳಲಿದ್ದು, ಇದಕ್ಕಾಗಿ ಈವರೆಗೆ ನಡೆಸಿರುವ 8,000ಕ್ಕೂ ಹೆಚ್ಚು ತಾಂತ್ರಿಕ ಪರೀಕ್ಷೆಗಳು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಹಾಗೂ ಕೇಂದ್ರ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ವಿ. ನಾರಾಯಣನ್ ತಿಳಿಸಿದ್ದಾರೆ.

ಬಾಹ್ಯಾಕಾಶಕ್ಕೆ ಮಾನವರನ್ನು ಸುರಕ್ಷಿತವಾಗಿ ಕಳುಹಿಸಿ, ಮರಳಿ ತರುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಕೈಗೊಂಡಿದ್ದ ಕಠಿಣ ಪ್ರಯೋಗಗಳು ಯಶಸ್ವಿ ಹಂತವನ್ನು ತಲುಪಿವೆ.

ಹಂತ ಹಂತವಾಗಿ ಸಿದ್ಧತೆ:

ಮಾನವ ಸಹಿತ ಯಾನಕ್ಕೂ ಮುನ್ನ ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮಗಳನ್ನು ಇಸ್ರೋ ಕೈಗೊಂಡಿದೆ. ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ, ಮೊದಲ ಹಂತವಾಗಿ ಇದೇ ವರ್ಷ ಅಂದರೆ 2026ರ ಕೊನೆಯ ವೇಳೆಗೆ ಯಾವುದೇ ಮಾನವರಿಲ್ಲದ ಮೊದಲ ಪ್ರಾಯೋಗಿಕ ಗಗನಯಾನ ನೌಕೆಯನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತದೆ. ಈ ಪರೀಕ್ಷೆಯ ಯಶಸ್ಸಿನ ಆಧಾರದ ಮೇಲೆ, 2027ರಲ್ಲಿ ಇಸ್ರೋ ವಿಜ್ಞಾನಿಗಳು ಭಾರತದ ಹೆಮ್ಮೆಯ ಗಗನಯಾತ್ರಿಗಳನ್ನು ಹೊತ್ತ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಿದ್ದಾರೆ.

8,000ಕ್ಕೂ ಹೆಚ್ಚು ಪರೀಕ್ಷೆಗಳು ಯಶಸ್ವಿ

ಯೋಜನೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೋ ವಿವಿಧ ಹಂತಗಳಲ್ಲಿ ಬರೋಬ್ಬರಿ 8,000ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ನಡೆಸಿದೆ. ಇದರಲ್ಲಿ ಮುಖ್ಯವಾಗಿ, ತುರ್ತು ಸಂದರ್ಭದಲ್ಲಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ರಕ್ಷಿಸುವ ವ್ಯವಸ್ಥೆಯ ಪರೀಕ್ಷೆ, ನೌಕೆಯ ಹಾರಾಟದ ಸಾಮರ್ಥ್ಯದ ಮೌಲ್ಯಮಾಪನ, ಭೂಮಿಗೆ ಮರಳಿ ಇಳಿಯುವಾಗ ವೇಗ ನಿಯಂತ್ರಿಸುವ ತಂತ್ರಜ್ಞಾನದ ಸುಧಾರಿತ ಪ್ರಯೋಗಗಳು ಯಶಸ್ವಿಯಾಗಿವೆ.

ಇದನ್ನೂ ಓದಿ:

ಇಸ್ರೋ ಅಧ್ಯಕ್ಷರ ಹೆಮ್ಮೆಯ ನುಡಿ

ಯೋಜನೆಯ ಪ್ರಗತಿಯ ಕುರಿತು ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥರು, “ಗಗನಯಾನವು ಭಾರತದ ತಾಂತ್ರಿಕ ಸಾರ್ವಭೌಮತ್ವದ ಸಂಕೇತವಾಗಿದೆ. ಮಾನವ ಸಹಿತ ಯಾನದಲ್ಲಿ ಗಗನಯಾತ್ರಿಗಳ ಸುರಕ್ಷತೆಯೇ ನಮಗೆ ಅತ್ಯಂತ ಪ್ರಮುಖ ಆದ್ಯತೆ. 8,000ಕ್ಕೂ ಹೆಚ್ಚು ಪರೀಕ್ಷೆಗಳ ಯಶಸ್ಸು ನಮ್ಮ ವಿಜ್ಞಾನಿಗಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. 2027ರ ಮಾನವ ಸಹಿತ ಮಿಷನ್ ಭಾರತವನ್ನು ಜಾಗತಿಕ ಬಾಹ್ಯಾಕಾಶ ರಂಗದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಿಷನ್ ಯಶಸ್ವಿಯಾದರೆ ರಷ್ಯಾ, ಅಮೆರಿಕ ಮತ್ತು ಚೀನಾ ನಂತರ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ಜಗತ್ತಿನ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !