November 17, 2026
Tuesday, November 17, 2026
spot_img

ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಭಕ್ತಸಾಗರ : ಬುಕಿಂಗ್‌ ಲಿಮಿಟ್‌ ಇದ್ದರೂ ಮಿತಿಮೀರಿದ ಜನಸಂದಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಬರಿಮಲೆಯ ಬೆಟ್ಟಗಳಲ್ಲಿ ಇದೀಗ ಮತ್ತೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರಘೋಷ ಮೊಳಗಲಿದೆ. ಇಂದು ವಾರ್ಷಿಕ ಅಯ್ಯಪ್ಪ ಮಂಡಲ ಯಾತ್ರೆಯ ಋತು ಆರಂಭವಾಗಿದ್ದು, ಬೆಳಗಿನ ಜಾವ ಮೂರು ಗಂಟೆಗೆ ಗರ್ಭಗುಡಿ ತೆರೆಯಲಾಗಿದೆ.

ಯಾತ್ರೆಯ ಮೊದಲ ದಿನವೇ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಲಕ್ಷಾಂತರ ಭಕ್ತರು ಶಬರಿಮಲೆ ತಲುಪಿದ್ದಾರೆ. ಅಯ್ಯಪ್ಪ ಸ್ವಾಮಿ ದರುಶನಕ್ಕಾಗಿ ಜನರು ಊಟ ತಿಂಡಿ, ಕನಿಷ್ಠ ಪಕ್ಷ ಶೌಚಾಲಯಗಳನ್ನೂ ಬಳಸದೇ ಬರೋಬ್ಬರಿ ಹತ್ತು ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದಾರೆ. ದೇವಾಲಯದ ಆಡಳಿತ ಮಂಡಳಿಯು ದರುಶನಕ್ಕಾಗಿ ಕಟ್ಟುನಿಟ್ಟಿನ ಮಿತಿಗಳನ್ನು ನಿಗದಿಪಡಿಸಿದೆ. ಆದರೂ ಜನ ಸಂದಣಿಯನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ರೂಲ್ಸ್‌ ಪ್ರಕಾರ ನಿತ್ಯವೂ 70 ಸಾವಿರ ಭಕ್ತರಿಗೆ ಆನ್‌ಲೈನ್ ವರ್ಚುವಲ್ ಕ್ಯೂ ಮೂಲಕ ಹಾಗೂ 20 ಸಾವಿರ ಭಕ್ತರಿಗೆ ಸ್ಥಳದಲ್ಲೇ ಸ್ಪಾಟ್ ಬುಕಿಂಗ್ ಮೂಲಕ ದರುಶನಕ್ಕೆ ಅವಕಾಶವಿದೆ. ಆದರೆ ಮುಂಗಡ ಟಿಕೆಟ್‌ ಬುಕ್‌ ಮಾಡದೇ ಸೀದ ದರುಶನಕ್ಕೆ ಲಕ್ಷಾಂತರ ಜನರು ಆಗಮಿಸಿದ್ದಾರೆ. ಇದರಿಂದ ಬುಕ್ಕಿಂಗ್‌ ಮಾಡಿಕೊಂಡು ಬಂದವರಿಗೂ ಸಮಸ್ಯೆ ಆಗಿದೆ. ಬುಕ್ಕಿಂಗ್‌ ಇಲ್ಲದ ಯಾತ್ರಿಗಳು, ಬುಕ್ಕಿಂಗ್‌ ಆಗಿರುವ ಯಾತ್ರಿಗಳು ಎಲ್ಲರಿಗೂ ಒಂದೇ ಕ್ಯೂ ಇರುವ ಕಾರಣ ಕಿಲೋಮೀಟರ್‌ಗಟ್ಟಲೆ ಯಾತ್ರಾರ್ಥಿಗಳು ದರುಶನಕ್ಕಾಗಿ ಕಾದು ನಿಂತಿದ್ದಾರೆ.

ಭಾರಿ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೀಲಕ್ಕಲ್ ಬಳಿ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಂಬಾ ಮತ್ತು ನೀಲಕ್ಕಲ್ ನಡುವೆ ನಿರಂತರವಾಗಿ ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ. ಇನ್ನು ಭಕ್ತರ ಪರದಾಟ ನೋಡಲಾಗದೇ ತಿರುವಾಂಕೂರು ದೇವಸ್ವಂ ಮಂಡಳಿ ಹಾಗೂ ಕೇರಳ ಪೊಲೀಸ್‌ ಇಲಾಖೆ ಜಂಟಿಯಾಗಿ ಹಲವು ವ್ಯವಸ್ಥೆಗಳನ್ನು ಮಾಡಿದೆ. ಭಕ್ತರಿಗಾಗಿ ಕುಡಿಯುವ ಶುದ್ಧ ನೀರು, ಲಘು ಉಪಹಾರಗಳನ್ನು ನೀಡಲಾಗುತ್ತಿದೆ.

ಇಂದಿನಿಂದ ದರುಶನ ಆರಂಭವಾಗಿದ್ದು, ಡಿ. 27 ರಂದು ನಡೆಯುವ ಮಂಡಲ ಪೂಜೆಯವರೆಗೂ ದೇವಸ್ಥಾನದ ಬಾಗಿಲು ತೆರೆದಿರಲಿದೆ. ಡಿ. 27ರ ರಾತ್ರಿ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ನಂತರ ಮತ್ತೆ ಡಿ. 30 ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಜನವರಿ 14 ರಂದು ಮಕರ ವಿಲಕ್ಕು ಉತ್ಸವ ನಡೆಯಲಿದ್ದು, ಜನವರಿ 30 ರಂದು ಪ್ರಸಕ್ತ ಸಾಲಿನ ಯಾತ್ರಾ ಋತು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ದೇವಾಲಯವನ್ನು ಮತ್ತೆ ಮುಚ್ಚಲಾಗುತ್ತದೆ.

Must Read