June 28, 2026
Sunday, June 28, 2026
spot_img

ಎಲ್ಲಕ್ಕೂ ಮೊದಲು ‘ನಾನು ಭಾರತೀಯ’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಲಿ: ಪಟ್ಟಾಭಿರಾಮ್

ಹೊಸದಿಗಂತ ವರದಿ ಚಿತ್ರದುರ್ಗ:

ದೇಶದ ಜನರಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಪ್ರಪಂಚದಲ್ಲೇ ಅದ್ವಿತೀಯ ಸಂಘವಾಗಿ ಬೆಳೆದು ನಿಂತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕರಾದ ಪಟ್ಟಾಭಿರಾಮ್ ಬಣ್ಣಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮದಮಿಕೊಂಡಿದ್ದ ಪ್ರಮುಖ ನಾಗರೀಕರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ವಿದೇಶಿ ದಾಳಿಕೋರರು ನಮ್ಮ ದೇಶದ ಮೇಲೆ ದಾಳಿ ನಡೆಸಿದ ಪರಿಣಾಮ ಭಾರತ ಸಾವಿರಾರು ವರ್ಷಗಳ ಕಾಲ ಗುಲಾಮಗಿರಿ ಅನುಭವಿಸುವಂತಾಯಿತು. ಹಾಗಾಗಿ ಇದಕ್ಕೆ ಕಾರಣವನ್ನು ಅರಿತ ಡಾ.ಹೆಗಡೆವಾರ್ ಅವರು ೧೯೨೫ರ ವಿಜಯದಶಮಿಯ ದಿನದಂದು ನಾಗಪುರದಲ್ಲಿ ಸಂಘವನ್ನು ಆರಂಭಿಸಿದರು ಎಂದರು.

ಹೀಗೆ ಅಸ್ಥಿತ್ವಕ್ಕೆ ಬಂದ ಸಂಘಕ್ಕೆ ಯಾವುದೇ ಹೆಸರು, ಭಾವುಟ, ಕರಪತ್ರ, ಕಚೇರಿ, ಸಮಿತಿ, ನೆರವಣಿಗೆ ಇರಲಿಲ್ಲ. ಎರಡು ವರ್ಷಗಳ ನಂತರ ಹೆಸರು ಬಂತು. ಹೀಗೆ ದೇಶಾಭಿಮಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಅಸ್ಥಿತ್ವಕ್ಕೆ ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದು ೫೩ ದೇಶಗಳಲ್ಲಿ ಕೆಲಸ ಮಾಡುತ್ತಿದೆ. ೪೦ಕ್ಕೂ ಹೆಚ್ಚು ವಿವಿಧ ಸಂಘಟನೆಗಳನ್ನು ಹೊಂದಿದೆ. ಲಕ್ಷಾಂತರ ಶಾಖೆಗಳನ್ನು ನಡೆಸುತ್ತಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ದೇವನೊಬ್ಬ ನಾಮ ಹಲವು ಎಂಬ ಮಾತಿನಂತೆ ವಿವಿಧ ರೂಪಗಳಲ್ಲಿ, ವಿವಿಧ ಹೆಸರುಗಳಲ್ಲಿ ದೇರವನ್ನು ಕಾಣುವುದೇ ಹಿಂದೂ ಸಂಸ್ಕೃತಿ. ಅಷ್ಟೇ ಏಕೆ ಪ್ರತಿಯೊಬ್ಬ ವ್ಯಕ್ತಿಯ ಆತ್ಮದಲ್ಲೂ ಪರಮಾತ್ಮ ಇದ್ದಾನೆ. ಸಕಲ ಜೀವರಾಶಿಗಳಲ್ಲಿ, ಅಣುರೇಣು ತೃಣಮಾತ್ರದಲ್ಲೂ ದೇವರನ್ನು ಕಾಣುವ ಶ್ರೇಷ್ಟ ಸಂಸ್ಕೃತಿ ನಮ್ಮದು. ಇಂತಹ ವಿಶೇಷ ಸಂಸ್ಕೃತಿಯಲ್ಲಿ ಹುಟ್ಟಿರುವ ನಾವುಗಳು ನಮ್ಮ ದೇಶ, ನಮ್ಮ ಸಂಸ್ಕೃತಿಯ ಬಗ್ಗೆ ಸದಾ ಹೆಮ್ಮೆಪಡಬೇಕು. ನಾನೊಬ್ಬ ಹಿಂದೂ ಎಂದು ಹೇಳಲು ಗರ್ವಪಡಬೇಕು ಎಂದರು.

ಒಂದು ಕಾಲದಲ್ಲಿ ಸರ್ಕಾರ ಇರಲಿಲ್ಲ. ಆದರೆ ರಾಷ್ಟ್ರ ಇತ್ತು. ಅದರಲ್ಲಿದ್ದ ಅನೇಕ ರಾಜ್ಯಗಳಲ್ಲಿ ಹಲವು ರಾಜಮನೆತನಗಳು ಆಡಳಿತ ನಡೆಸುತ್ತಿದ್ದವು. ಆದಾಗ್ಯೂ ಸಾಂಸದಕೃತಿಕವಾಗಿ ಒಂದೇ ಆಗಿದ್ದವು. ಅದರಂತೆ ಇಂದಿಗೂ ನಮ್ಮ ದೇಶವು ವಿವಿಧ ಸಂಸ್ಕೃತಿಗಳು, ವಿವಿಧ ಧರ್ಮಗಳನ್ನು ಒಳಗೊಂಡಿದೆ. ಇವುಗಳನ್ನು ಪರಸ್ಪರ ಗೌರವಿಸುತ್ತಾ ನಡೆಯುವುದೇ ಹಿಂದೂ ಭಾವನೆ. ಪ್ರತಿಯೊಬ್ಬರೂ ಇಂತಹ ಶ್ರೇಷ್ಟ ಭಾವನೆ ಬೆಳೆಸಿಕೊಳ್ಳಬೇಕಿದೆ. ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನೂ ನಾನು ಭಾರತೀಯ ಎಂಬ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಸಂಚಾಲಕರಾದ ನಾಗೇಶ್ ವೇದಿಕೆಯಲ್ಲಿದ್ದರು. ಹಿಂದೂ ಸಮಾಜದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಮೊಗ್ಗ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೋಟ್ಲ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !