June 29, 2026
Monday, June 29, 2026
spot_img

ಮಗ ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಗೆಳೆಯನ ಕಲ್ಲಿನಿಂದ ಜಜ್ಜಿ ಕೊ*ಲೆ: 48 ಗಂಟೆಯೊಳಗೆ ಆರೋಪಿ ಅರೆಸ್ಟ್

ಹೊಸದಿಗಂತ ವರದಿ ಬೆಳಗಾವಿ :

ಮಗ ಹುಟ್ಟಿದ ಖುಷಿಗೆ ಪಾರ್ಟಿ ಹಾಗೂ ಬೈಕ್ ಕೇಳಿದ ಗೆಳೆಯನನ್ನೇ ಅತ್ಯಂತ ಕ್ರೂರವಾಗಿ ಕಲ್ಲಿನಿಂದ ಹೊಡೆದು ಕೊಂದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.

ಘಟನೆ ನಡೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಪೊಲೀಸರು ಕೇವಲ 48 ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ.ರಾಮರಾಜನ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಣ್ಣೂರ ಗ್ರಾಮದ ಹನುಮಂತಪ್ಪ ಯಮನಪ್ಪ ಇತಾಪಿ ಕೊಲೆಯಾದ ದುರ್ದೈವಿ. ಅದೇ ಗ್ರಾಮದ ವಿಶ್ವನಾಥ ಸಿದ್ದಯ್ಯ ಪೂಜೇರಿ (29) ಬಂಧಿತ ಆರೋಪಿ.

ಘಟನೆಯ ಹಿನ್ನೆಲೆ:

ಜೂನ್ 26 ರಂದು ಹನುಮಂತಪ್ಪ ಅವರು ತಮ್ಮ ಗೆಳೆಯ ವಿಶ್ವನಾಥ ಪೂಜೇರಿ ಬಳಿ ಹೋಗಿ, “ನಿನಗೆ ಮಗ ಹುಟ್ಟಿದ್ದಾನೆ, ಪಾರ್ಟಿ ಕೊಡು, ಸರಾಯಿ ಕುಡಿಸು ಹಾಗೂ ನಿನ್ನ ಬೈಕ್ ಕೊಡು” ಎಂದು ಕೇಳಿದ್ದಾರೆ. ಈ ಸಣ್ಣ ವಿಚಾರ ಇಬ್ಬರ ನಡುವೆ ತೀವ್ರ ಜಗಳಕ್ಕೆ ಕಾರಣವಾಗಿದೆ. ಮಾತಿಗೆ ಮಾತು ಬೆಳೆದು ತೀವ್ರ ಆಕ್ರೋಶಗೊಂಡ ಆರೋಪಿ ವಿಶ್ವನಾಥ, ಕೊಲೆ ಮಾಡುವ ಉದ್ದೇಶದಿಂದಲೇ ಹನುಮಂತಪ್ಪನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲೇ ಇದ್ದ ದೊಡ್ಡ ಕಲ್ಲಿನಿಂದ ಹನುಮಂತಪ್ಪನ ತಲೆಗೆ ಜೋರಾಗಿ ಜಜ್ಜಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಗೊಂಡ ಹನುಮಂತಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆರೋಪಿ ಅಲ್ಲಿಂದ ಪರಾರಿಯಾಗಿದ್ದ.

ಇದನ್ನೂ ಓದಿ:

ಮೃತನ ತಂದೆ ಯಮನಪ್ಪ ಇತಾಪಿ ನೀಡಿದ ದೂರಿನ ಮೇರೆಗೆ ನೇಸರಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಪೊಲೀಸರ ಚುರುಕಿನ ಕಾರ್ಯಾಚರಣೆ:

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ಪಿ ಕೆ.ರಾಮರಾಜನ್, ಹೆಚ್ಚುವರಿ ಎಸ್ಪಿ ರಾಮುಗೊಂಡ ಬಸರಗಿ ಹಾಗೂ ಬೈಲಹೊಂಗಲ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ನೇಸರಗಿ ಸಿಪಿಐ ಗಜಾನನ ನಾಯ್ಕ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಕಾರ್ಯಪ್ರವೃತ್ತರಾದ ವಿಶೇಷ ತಂಡವು ಕೇವಲ 48 ಗಂಟೆಗಳ ಒಳಗಾಗಿ ಚುರುಕಿನ ಕಾರ್ಯಾಚರಣೆ ನಡೆಸಿ, ಜೂನ್ 28 ಭಾನುವಾರ ರಂದು ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವನಾಥ ಪೂಜೇರಿಯನ್ನು ಹೆಡೆಮುರಿ ಕಟ್ಟಿದೆ.

ನ್ಯಾಯಾಂಗ ಬಂಧನಕ್ಕೆ ಆರೋಪಿ:

ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !