October 17, 2026
Saturday, October 17, 2026
spot_img

ಮತ್ತೆ ಅಪಾಯದ ವಾರ್ನಿಂಗ್ ನೀಡಿದ ಕೆತ್ತಿಕಲ್‌: ತಡೆಗೋಡೆ ಕಾಮಗಾರಿ ವೇಳೆ ಜೆಸಿಬಿ ಮೇಲೆ ಉರುಳಿದ ಬೃಹತ್ ಬಂಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು–ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್‌ನಲ್ಲಿ ಸೋಮವಾರ ಹೆದ್ದಾರಿ ಕಾಮಗಾರಿ ವೇಳೆ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭ, ಗುಡ್ಡದ ಮೇಲಿನಿಂದ ಬೃಹತ್ ಮುರಕಲ್ಲಿನ ಬಂಡೆಯೊಂದು ಕೆಲಸ ಮಾಡುತ್ತಿದ್ದ ಜೆಸಿಬಿ ಮೇಲೆ ಉರುಳಿಬಿದ್ದ ಪರಿಣಾಮ ಯಂತ್ರಕ್ಕೆ ಹಾನಿಯಾಗಿದ್ದು, ಜೆಸಿಬಿ ಆಪರೇಟರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆತ್ತಿಕಲ್‌ನಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ ತಡೆಯುವ ಉದ್ದೇಶದಿಂದ ಹೆದ್ದಾರಿ ಬದಿಯಲ್ಲಿ ತಡೆಗೋಡೆ ನಿರ್ಮಿಸಲು ಜೆಸಿಬಿ ಮೂಲಕ ಮಣ್ಣು ಅಗೆಯುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಗುಡ್ಡದ ಮೇಲ್ಭಾಗದಿಂದ ದೊಡ್ಡ ಗಾತ್ರದ ಮುರಕಲ್ಲಿನ ಬಂಡೆಯೊಂದು ಏಕಾಏಕಿ ಉರುಳಿ ಬಂದು ಜೆಸಿಬಿಯ ಬಕೆಟ್ ಭಾಗಕ್ಕೆ ಅಪ್ಪಳಿಸಿದೆ. ಈ ರಭಸಕ್ಕೆ ಜೆಸಿಬಿಯ ಬಕೆಟ್ ಭಾಗ ಜಖಂಗೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆಪರೇಟರ್ ಸಮಯಪ್ರಜ್ಞೆ ಮೆರೆದು ತಕ್ಷಣ ಕೆಳಗೆ ಹಾರಿದ್ದರಿಂದ ದೊಡ್ಡ ದುರಂತ ತಪ್ಪಿದೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕಳೆದ ಮಳೆಗಾಲದಲ್ಲಿಯೂ ಇದೇ ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ವೇಳೆ ನಡೆದ ಈ ಘಟನೆ ಸ್ಥಳದ ಅಪಾಯದ ಮಟ್ಟವನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಘಟನೆಯ ಬಳಿಕ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Must Read