October 9, 2026
Friday, October 9, 2026
spot_img

ಯುದ್ಧದ ಸೌಂಡ್ ನಡುವೆ ಶಾಂತಿ ಮಂತ್ರ: ಕತಾರ್‌ನಲ್ಲಿ ಡೊನಾಲ್ಡ್ ಟ್ರಂಪ್-ಇರಾನ್ ರಹಸ್ಯ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ರಾಜತಾಂತ್ರಿಕ ಸಂಘರ್ಷಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇರಾನ್ ದೇಶದ ಕೋರಿಕೆಯ ಮೇರೆಗೆ ಜೂನ್ 30ರಂದು ಕತಾರ್‌ನ ದೋಹಾದಲ್ಲಿ ಉಭಯ ದೇಶಗಳ ಉನ್ನತ ಮಟ್ಟದ ಸಭೆ ನಿಗದಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಷಿಯಲ್’ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಏನಿದು ಹಾರ್ಮುಜ್ ಜಲಸಂಧಿ ವಿವಾದ?

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣಕ್ಕಾಗಿ ಉಭಯ ದೇಶಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಇರಾನ್ ಸರಕು ಹಡಗಿನ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಕೇಂದ್ರಗಳ ಮೇಲೆ ವಾಯುದಾಳಿ ನಡೆಸಿ ಪ್ರತ್ಯುತ್ತರ ನೀಡಿತ್ತು. ಪ್ರಸ್ತುತ ಉದ್ವಿಗ್ನತೆಯನ್ನು ತಿಳಿಗೊಳಿಸಲು ಈ ಸಭೆ ಆಯೋಜಿಸಲಾಗಿದೆ.

ಶ್ವೇತಭವನದ ಸಿದ್ಧತೆ ಮತ್ತು ರಾಯಭಾರಿಗಳ ನಿಯೋಜನೆ

ಈ ಮಹತ್ವದ ಮಾತುಕತೆಗಾಗಿ ಟ್ರಂಪ್ ಸರ್ಕಾರ ಸಜ್ಜಾಗಿದ್ದು, ಮಧ್ಯಪ್ರಾಚ್ಯದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಶಾಂತಿ ಪ್ರಕ್ರಿಯೆಯ ವಿಶೇಷ ರಾಯಭಾರಿ ಜ್ಯಾರೆಡ್ ಕುಶ್ನರ್ ಅಮೆರಿಕವನ್ನು ಪ್ರತಿನಿಧಿಸಲಿದ್ದಾರೆ. ಸದ್ಯ ಜಾರಿಯಲ್ಲಿರುವ ಸೂಕ್ಷ್ಮ ಮಧ್ಯಂತರ ಒಪ್ಪಂದವನ್ನು ಉಳಿಸಿಕೊಳ್ಳುವುದು ಶ್ವೇತಭವನದ ಮುಖ್ಯ ಉದ್ದೇಶವಾಗಿದೆ.

6 ಬಿಲಿಯನ್ ಡಾಲರ್ ಆಸ್ತಿ ಬಿಡುಗಡೆ

ಇದೇ ವೇಳೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮಹತ್ವದ ಮಾಹಿತಿ ನೀಡಿದ್ದು, ಕತಾರ್‌ನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನ್‌ನ 6 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಮುಕ್ತಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. ಇತ್ತ ಪ್ರಮುಖ ಸಂಧಾನಕಾರ ರಾಷ್ಟ್ರವಾಗಿರುವ ಪಾಕಿಸ್ತಾನ ಕೂಡ ಮಂಗಳವಾರದಿಂದ ಅಧಿಕೃತ ಮಾತುಕತೆಗಳು ಪುನರಾರಂಭಗೊಳ್ಳಲಿವೆ ಎಂದು ಖಚಿತಪಡಿಸಿದೆ.

Must Read