ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಮೂರು ವರ್ಷಗಳಿಂದ ಸೋಲನ್ನೇ ಕಾಣದ ಸರದಾರನಂತೆ ಮೆರೆಯುತ್ತಿದ್ದ ಟೀಮ್ ಇಂಡಿಯಾ ಅಧಿಪತ್ಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ತವರು ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿದ ಐರ್ಲೆಂಡ್ ತಂಡ, ಭಾರತವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಸರಣಿ ಜಯ ಸಾಧಿಸಿದೆ. ಇದರೊಂದಿಗೆ ಭಾರತದ ಸುದೀರ್ಘ ಕಾಲದ ಅಜೇಯ ದಾಖಲೆ ಧೂಳೀಪಟವಾಗಿದೆ.
ಅಚ್ಚರಿಯ ಕಾಕತಾಳೀಯ!
ಇಲ್ಲಿ ಗಮನಿಸಬೇಕಾದ ರೋಚಕ ಸಂಗತಿಯೆಂದರೆ, ಭಾರತದ ಈ ಐತಿಹಾಸಿಕ ಗೆಲುವಿನ ಓಟವು 2023 ರಲ್ಲಿ ಇದೇ ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಆರಂಭವಾಗಿತ್ತು. ಇದೀಗ ಸರಿಯಾಗಿ ಮೂರು ವರ್ಷಗಳ ಬಳಿಕ ಅದೇ ಐರಿಶ್ ಮಣ್ಣಿನಲ್ಲಿ ಭಾರತದ ವಿಜಯಯಾತ್ರೆಗೆ ಅಂತ್ಯ ಹಾಡಿರುವುದು ಒಂದು ವಿಶಿಷ್ಟ ಕಾಕತಾಳೀಯ.
16 ಸರಣಿಗಳ ಅಧಿಪತ್ಯ ಅಂತ್ಯ
ಕಳೆದ 2023 ರ ಆಗಸ್ಟ್‌ನಿಂದ ಭಾರತ ತಂಡ ಆಡಿದ ಸತತ 16 ಟಿ20 ಸರಣಿ ಹಾಗೂ ಪ್ರಮುಖ ಟೂರ್ನಿಗಳಲ್ಲಿ ಸೋತಿರಲಿಲ್ಲ. ಈ ಸುವರ್ಣ ಅವಧಿಯಲ್ಲಿ ಭಾರತ ತಂಡ ಎರಡು ಬಾರಿ ಟಿ20 ವಿಶ್ವಕಪ್, ಏಷ್ಯಾಕಪ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಆರಂಭವಾಗಿದ್ದ ಈ ವಿಜಯದ ರಥ, ಒಟ್ಟು 73 ಪಂದ್ಯಗಳ ಅವಧಿಯಲ್ಲಿ ಒಂದೇ ಒಂದು ಸರಣಿಯನ್ನೂ ಕೈಬಿಟ್ಟಿರಲಿಲ್ಲ (ಕೇವಲ ಒಂದು ಸರಣಿ ಡ್ರಾ ಆಗಿತ್ತು). ಆದರೆ ಪ್ರಸ್ತುತ ಪ್ರವಾಸದಲ್ಲಿ ಐರಿಶ್ ತಂತ್ರದ ಮುಂದೆ ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಮಂಡಿಯೂರಿ ಸರಣಿ ಕೈಚೆಲ್ಲಿದೆ.



