ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ನಟನೆಯ, ಭಾರತೀಯ ಚಿತ್ರರಂಗದ ಮೋಸ್ಟ್ ಅಟಿಸಿಪೇಟೆಡ್ ಸಿನಿಮಾ ‘ಟಾಕ್ಸಿಕ್’ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿ ಯಶ್ ಅವರ ದ್ವಿಪಾತ್ರದ ಝಲಕ್ ಸಖತ್ ಸೌಂಡ್ ಮಾಡಿತ್ತು. ಆದರೆ, ಸಿನಿಮಾದಲ್ಲಿ ಐವರು ನಾಯಕಿಯರಿದ್ದರೂ ಕೇವಲ ಯಶ್ ಪಾತ್ರವನ್ನಷ್ಟೇ ಹೈಲೈಟ್ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕಿಸಿದ್ದರು. ಇದೀಗ ಈ ಪ್ರಶ್ನೆಗೆ ಸ್ವತಃ ಯಶ್ ಅವರೇ ಇನ್‌ಸ್ಟಾಗ್ರಾಂ ಮೂಲಕ ಉತ್ತರ ನೀಡಿದ್ದಾರೆ.
‘ಮಹಿಳೆಯರು ಬರಲು ಸಮಯ ಬೇಕು!’
‘ವೇರ್ ಇಸ್ ಲೇಡೀಸ್?’ (ಮಹಿಳೆಯರು ಎಲ್ಲಿ?) ಎಂದು ಕೇಳುತ್ತಿದ್ದವರಿಗೆ ಯಶ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಮಹಿಳೆಯರು ಬರಲು ತುಸು ಸಮಯ ತೆಗೆದುಕೊಳ್ಳುತ್ತಾರೆ. ನಾಳೆ (ಜುಲೈ 1) ಹೆಣ್ಣುಮಕ್ಕಳು ಬರಲಿದ್ದಾರೆ, ನೀವು ಸ್ವಲ್ಪ ಬಿಡುವು ಮಾಡಿಕೊಂಡು ಬನ್ನಿ” ಎಂದು ಬರೆದುಕೊಂಡು, ಕೆವಿಎನ್ ಪ್ರೊಡಕ್ಷನ್ಸ್‌ನ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ.
ಐವರು ಸ್ಟಾರ್ ನಾಯಕಿಯರ ಕ್ಯಾರೆಕ್ಟರ್ ಟೀಸರ್?
ಯಶ್ ಅವರ ಈ ಪೋಸ್ಟ್ ಪ್ರಕಾರ, ಜುಲೈ 1 ರಂದು ಚಿತ್ರದ ನಾಯಕಿಯರ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕರಾವಳಿ ಬೆಡಗಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಇವರ ಪಾತ್ರಗಳ ಪರಿಚಯ ನಾಳೆ ಅಧಿಕೃತವಾಗಿ ಹೊರಬೀಳಲಿದೆ.



