ಹೊಸದಿಗಂತ ಡಿಜಿಟಲ್ ಡೆಸ್ಕ್:
10ನೇ ತರಗತಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿ, ನಂತ ಮರುಪ್ರವೇಶಕ್ಕೆ ನಿರಾಕರಿಸಿದ್ದಕ್ಕೆ ಬೇಸರಿಸಿಕೊಂಡು ತಾಯಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಭಾರತೀನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಷ ಸೇವಿಸಿದ ತಾಯಿ ಸುಮಿತ್ರಾ ಮಗ ಹಾಗೂ ಒಂಬತ್ತನೇ ತರಗತಿಯ ವಿದ್ಯಾರ್ಥಿ ನಡುವೆ ಜಗಳ ನಡೆದಿತ್ತು. ಶಾಲೆ ಮುಗಿದ ನಂತರ ಇಬ್ಬರೂ ಹಲ್ಲೆ ಮಾಡಿಕೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ನಂತರ ಇಬ್ಬರು ಮಕ್ಕಳ ಪೋಷಕರು ಮಾತುಕತೆ ನಡೆಸಿ ರಾಜೀ ಮಾಡಿದ್ದರು. ಸುಮಿತ್ರಾ ಒಂಬತ್ತನೇ ತರಗತಿ ವಿದ್ಯಾರ್ಥಿಯ ವೈದ್ಯಕೀಯ ವೆಚ್ಚವನ್ನು ಭರಿಸಿದ್ದರು.
ಇದೆಲ್ಲ ಆದ ನಂತರ 10ನೇ ತರಗತಿ ವಿದ್ಯಾರ್ಥಿಯನ್ನು ಮಾತ್ರ ಶಾಲೆಯ ಆಡಳಿತ ಮಂಡಳಿ ಅಮಾನತುಗೊಳಿಸಿದೆ ಎಂದು ಕುಟುಂಬ ಆರೋಪಿಸಿದೆ.ಘಟನೆಯ ಬಳಿಕ ಎರಡು ವಾರಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗೆ ಶಾಲೆಗೆ ಮರಳಲು ಅವಕಾಶ ನೀಡದೆ, ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ತರಬೇಕೆಂದು ಶಾಲೆ ಒತ್ತಾಯಿಸಿದೆ ಎಂದು ಹೇಳಿದ್ದಾರೆ.
ಕುಟುಂಬದ ಮನವಿಯ ಮೇರೆಗೆ ಭಾರತಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ವಿದ್ಯಾರ್ಥಿ ಅಪ್ರಾಪ್ತನಾಗಿದ್ದು ಆತನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ತಿಳಿಸಿ, ಮತ್ತೆ ತರಗತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದಾದ ನಂತರವೂ ಮಗುವನ್ನು ಶಾಲೆಗೆ ಸೇರಿಸಿಕೊಂಡಿಲ್ಲ. ಇದರಿಂದ ಮನನೊಂದ ಸುಮಿತ್ರಾ ಶಾಲೆಯ ಶೌಚಾಲಯದಲ್ಲಿಯೇ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



