ಹೊಸದಿಗಂತ ವರದಿ ವಿಜಯಪುರ:
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಕಬ್ಬು ನುರಿಸುವ ಖೊಟ್ಟಿ ರಸೀದಿ ತಯಾರಿಸಿ ಕೋಟ್ಯಂತರ ರೂ.ಗಳ ಅವ್ಯವಹಾರ ಮಾಡಿದ 7 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 11,23,07,569 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಧರೆಪ್ಪ ದುಂಡಪ್ಪ ನಾವಿ ಸೇರಿದಂತೆ ಬೀರಪ್ಪ ಗಾಡದಾರ, ಯಲ್ಲಪ್ಪ ಬಸಪ್ಪ ಗಾಡದರ, ಪ್ರಕಾಶ ಸಿದ್ದಲಿಂಗ ಗಡ್ಡಿ, ಪರಮಾನಂದ ಪುಂಡಲೀಕ ಗಡ್ಡಿ, ಮಹಾದೇವ ಸಿದ್ದಲಿಂಗ ಕಾಂಬಳೆ ಉರ್ಫ್ ಸಿಂಗೆ, ಬಾಳಪ್ಪ ಪಾಂಡು ಚೋಪಡೆ, ಪ್ರಭಾಕರ ಮಧುಕರ ಸಿಂಗೆ ಎಂಬವರನ್ನು ಬಂಧಿಸಲಾಗಿದೆ ಎಂದರು.
ಕಳೆದ ಜೂ. 12 ರಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಕಾರ್ಖಾನೆಯಲ್ಲಿ ಕೆಲವರಿಂದ ಮೋಸವಾಗುತ್ತಿರುವ ಬಗ್ಗೆ ದೂರು ನೀಡಿದ್ದರು, ನಂದಿ ಸಕ್ಕರೆ ಕಾರ್ಖಾನೆಯ ಕಬ್ಬು ತೂಕ ವಿಭಾಗದಲ್ಲಿ ಕೆಲಸ ಮಾಡುವ ಧರೆಪ್ಪ ದುಂಡಪ್ಪ ನಾವಿ ಹಾಗೂ ಇನ್ನೀತರರು ಸೇರಿಕೊಂಡು 2020-21 ನೇ ಸಾಲಿನಿಂದ ಸನ್ 2025-26 ನೇ ಸಾಲಿನ 6 ವರ್ಷಗಳ ನಡುವಿನ ಅವಧಿಯ ಕಬ್ಬು ನುರಿಸುವ ಹಂಗಾಮಿನಲ್ಲಿ ಬೇರೆ ಬೇರೆ ರೈತರ ಹೆಸರಿನಲ್ಲಿ ಒಟ್ಟು 1,79,81,725 ಮೆಟ್ರಿಕ್ ಟನ್ ಕಬ್ಬನ್ನು ಮೋಸದಿಂದ ತೂಕ ಮಾಡಿ ಬೋಗಸ್ ರಸೀದಿ ತಯಾರಿಸಿ ತಮಗೆ ಬೇಕಾದ ಬೇರೆ- ಬೇರೆಯವರ ಹೆಸರಿಗೆ ಇರುವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ, ಆ ಮೂಲಕ ಹಣ ಪಡೆದು, ಹಣ ದುರುಪಯೋಗ ಪಡಿಸಿಕೊಂಡು, ಸಕ್ಕರೆ ಕಾರ್ಖಾನೆಗೆ ಮೋಸ ಮಾಡಿದ್ದಾರೆ ಎಂದು ಬಬಲೇಶ್ವರ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ದೂರನ್ನು ಆಧರಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
ಆರೋಪಿ ಧರೆಪ್ಪ ದುಂಡಪ್ಪ ನಾವಿಯಿಂದ 21,00,000 ರೂ. ನಗದು, ಆತನ ಬ್ಯಾಂಕ ಖಾತೆಯಿಂದ 4,80,47,981 ರೂ. ಹೀಗೆ ಒಟ್ಟು 5,01,47,981 ರೂ. ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾದ ಒಟ್ಟು 5,48,52,102 ರೂ. ಹಾಗೂ 10,50,00,083 ರೂ. ಜಪ್ತು ಮಾಡಲಾಗಿದ್ದು, 82,07,569 ರೂ. ಹಣವನ್ನು ಬ್ಯಾಂಕ್‌ನಲ್ಲಿ ಫ್ರಿಜ್ ಮಡಲಾಗಿದೆ ಹೀಗೆ ಒಟ್ಟು 11,32,07,569 ರೂ. ಹಣವನ್ನು ಜಪ್ತು ಮಾಡಿಕೊಳ್ಳಲಾಗಿದೆ. ಈ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ಎಎಸ್‌ಪಿ ರಾಮನಗೌಡ ಹಟ್ಟಿ, ಪೊಲೀಸ್ ಅಧಿಕಾರಿ ರಮೇಶ ಅವಜಿ, ಬಿ.ಎಂ. ಬಸನಗೌಡ, ಎಸ್.ಆರ್. ಹಿರೇಗಾಣ, ಎಲ್.ಎಸ್. ಹಿರೇಗೌಡ ಸೇರಿ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.



