October 10, 2026
Saturday, October 10, 2026
spot_img

ಜೆಡಿಎಸ್ ಬಿಟ್ಟಿದ್ದೇ ಇದಕ್ಕೋಸ್ಕರ, ಈಗ ಕಾಂಗ್ರೆಸ್‌ನಲ್ಲೂ ಅದೇ ಕಥೆ: ಶಾಸಕ ಶ್ರೀನಿವಾಸ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್’ ಯೋಜನೆಗೆ ಈಗ ಸ್ವಪಕ್ಷದ ಒಳಗಿನಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌.ಆರ್. ಶ್ರೀನಿವಾಸ್ ಅವರು ಈ ಕಾಮಗಾರಿಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.

ಕಾಂಗ್ರೆಸ್ ತೊರೆಯುವ ಮುನ್ಸೂಚನೆ ಕೊಟ್ಟ ಶಾಸಕ?

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್, “ಹಿಂದೆ ಜೆಡಿಎಸ್ ಪಕ್ಷವನ್ನು ತೊರೆಯಲು ಈ ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಾಣದ ನಿರ್ಧಾರವೇ ಪ್ರಮುಖ ಕಾರಣವಾಗಿತ್ತು. ಈಗ ನಮ್ಮ ತೀವ್ರ ವಿರೋಧದ ನಡುವೆಯೂ ಮತ್ತೆ ಈ ಕಾಮಗಾರಿ ಆರಂಭಿಸಿದರೆ, ನಾನು ಕಾಂಗ್ರೆಸ್ ಪಕ್ಷದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗುತ್ತದೆ,” ಎಂದು ಹೈಕಮಾಂಡ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಅಂದು ಜೆಡಿಎಸ್, ಇಂದು ಕಾಂಗ್ರೆಸ್: ಹಳೆ ಇತಿಹಾಸ ನೆನೆದ ಶ್ರೀನಿವಾಸ್

“ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಡಿಕೆಶಿ ಜಲಸಂಪನ್ಮೂಲ ಸಚಿವರಾಗಿದ್ದರು. ಆಗ ಈ ಯೋಜನೆಗೆ ಅನುಮೋದನೆ ನೀಡಿದಾಗ ನಾನು ಸಂಪುಟ ಸಭೆಯಿಂದಲೇ ಹೊರಬಂದಿದ್ದೆ. ಅಂದು ನನ್ನ ಮಾತಿಗೆ ಬೆಲೆ ಸಿಗದಿದ್ದಕ್ಕೆ ಜೆಡಿಎಸ್ ಬಿಟ್ಟೆ. ಈಗ ಹಾಲಿ ಮುಖ್ಯಮಂತ್ರಿಗಳಿಗೂ ನನ್ನ ಅಭಿಪ್ರಾಯ ತಿಳಿಸಿದ್ದು, ನೀರನ್ನು ನಾಲೆಯಲ್ಲೇ ಕೊಂಡೊಯ್ಯುವಂತೆ ಮನವಿ ಮಾಡಿದ್ದೇನೆ. ನಮ್ಮ ಮಾತಿಗೆ ಎಷ್ಟು ಗೌರವ ಸಿಗುತ್ತದೆ ಎಂದು ಕಾದು ನೋಡುತ್ತೇನೆ,” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ನಡೆ ರಾಜ್ಯ ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

Must Read