ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬಾರಿ ಔಷಧಗಳಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 283 ಔಷಧಗಳ ಬೆಲೆ ಇಳಿಕೆಗೆ ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಾಂಶಕ್ಕೆ ಮಿತಿ ವಿಧಿಸುವ ಕೇಂದ್ರದ ಕ್ರಮವನ್ನು ಸ್ವಾಗತಿಸಿದ ಅವರು, ಇದನ್ನು ಕರ್ನಾಟಕದ ಪಾಲಿಗೆ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಮಾತನಾಡಿದ ಖಾದರ್, ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ರೋಗಿಗಳು ಮತ್ತು ಅವರ ಕುಟುಂಬಗಳು ತೀವ್ರ ಆರ್ಥಿಕ ಒತ್ತಡ ಎದುರಿಸುತ್ತಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದರು. ಔಷಧಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಮನವಿ ಸಲ್ಲಿಸಲಾಗಿತ್ತು. ಇದೀಗ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು, 283 ಔಷಧಗಳ ಬೆಲೆ ಇಳಿಕೆಗೆ ಸಂಬಂಧಿಸಿದ ಕ್ರಮ ಆರಂಭವಾಗಿದೆ ಎಂದು ತಿಳಿಸಿದರು. ಈ ಪ್ರಯತ್ನದಲ್ಲಿ ಅಧಿಕಾರಿಗಳ ಪರಿಶ್ರಮ ಹಾಗೂ ರಾಷ್ಟ್ರೀಯ ಮಾಧ್ಯಮಗಳ ವರದಿಗಳೂ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.
ಔಷಧಗಳ ಬೆಲೆ ನಿಗದಿಯಲ್ಲಿ ಪಾರದರ್ಶಕತೆಗೆ ಒತ್ತು
ಔಷಧಗಳ ವ್ಯಾಪಾರ ಲಾಭಾಂಶವನ್ನು ಶೇ.30ರೊಳಗೆ ನಿಯಂತ್ರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ ಎಂದು ಖಾದರ್ ತಿಳಿಸಿದರು. ಈ ಹಿಂದೆ ಔಷಧಗಳ ಪ್ಯಾಕೆಟ್‌ಗಳಲ್ಲಿ ಗರಿಷ್ಠ ಚಿಲ್ಲರೆ ಬೆಲೆ ಮಾತ್ರ ಕಾಣಿಸುತ್ತಿತ್ತು. ಆದರೆ, ಉತ್ಪಾದನಾ ವೆಚ್ಚ ಮತ್ತು ಮಾರಾಟದ ಬೆಲೆಯನ್ನೂ ಬಹಿರಂಗಪಡಿಸುವ ವ್ಯವಸ್ಥೆ ಜಾರಿಗೆ ಬಂದರೆ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
2,000 ಕೋಟಿ ರೂ ಉಳಿತಾ
ಈ ಕ್ರಮ ಪರಿಣಾಮಕಾರಿಯಾಗಿ ಜಾರಿಯಾದರೆ ಸುಮಾರು 6,500 ಔಷಧಗಳಿಗೆ ಸಂಬಂಧಿಸಿದ ಬೆಲೆ ನಿಯಂತ್ರಣದಿಂದ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಈ ಕ್ರಮ ಸಮರ್ಪಕವಾಗಿ ಅನುಷ್ಠಾನಗೊಂಡರೆ ಸಾರ್ವಜನಿಕರಿಗೆ ಸುಮಾರು 2,000 ಕೋಟಿ ಉಳಿತಾಯವಾಗಬಹುದು ಎಂದೂ ಖಾದರ್ ಅಂದಾಜಿಸಿದ್ದಾರೆ.
ದುಬಾರಿ ಚಿಕಿತ್ಸೆಗೆ ನಿಯಂತ್ರಣ ಅಗತ್ಯ
ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳ ಬೆಲೆಗೆ ಸೂಕ್ತ ಮಿತಿ ವಿಧಿಸಬೇಕು. ವೈದ್ಯಕೀಯ ಉಪಕರಣಗಳು ಮತ್ತು ಚಿಕಿತ್ಸಾ ಸಾಮಗ್ರಿಗಳ ಮೇಲಿನ ಹೆಚ್ಚಿನ ಲಾಭಾಂಶವನ್ನೂ ನಿಯಂತ್ರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಔಷಧಗಳ ಬೆಲೆ ನಿಯಂತ್ರಣದ ಉದ್ದೇಶ ಕಾಗದದಲ್ಲಷ್ಟೇ ಉಳಿಯದೆ, ರೋಗಿಗಳಿಗೆ ನೇರವಾಗಿ ಪ್ರಯೋಜನ ನೀಡಬೇಕು. ಪಾರದರ್ಶಕ ಬೆಲೆ ನಿಗದಿ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆ ಜಾರಿಯಾದಾಗ ಮಾತ್ರ ದುಬಾರಿ ಚಿಕಿತ್ಸೆಯ ಹೊರೆ ಕಡಿಮೆಯಾಗಲು ಸಾಧ್ಯ.



