July 1, 2026
Wednesday, July 1, 2026
spot_img

‘ಪ್ರತ್ಯಕ್ಷ ಸಾಕ್ಷಿಗಳೇ ಇಲ್ಲ’… ಆದರೂ ಶಿಕ್ಷೆ ಹೇಗೆ? ಲೋಹಗಢ ಕೋಟೆ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ‘ಪಂಚಶೀಲ’ವೇ ಅಸ್ತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ದೇಶವನ್ನೇ ಬೆಚ್ಚಿಬೀಳಿಸಿರುವ ಪುಣೆ ಲೋಹಗಢ ಕೋಟೆ ಕೊಲೆ ಪ್ರಕರಣದಲ್ಲಿ ತನಿಖೆ ಮಹತ್ವದ ಹಂತ ತಲುಪಿದ್ದು, ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿದಾರರಿಲ್ಲದ ಕಾರಣ, ಆರೋಪಿ ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ವಿರುದ್ಧದ ಆರೋಪ ಸಾಬೀತುಪಡಿಸಲು ಪೊಲೀಸರು ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳನ್ನೇ ಅವಲಂಬಿಸಿದ್ದಾರೆ.

ಸಧ್ಯ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ‘ಪಂಚಶೀಲ’ ತತ್ವಗಳು ತನಿಖೆಯ ಪ್ರಮುಖ ಆಧಾರವಾಗಿವೆ.


ಏನಿದು ‘ಪಂಚಶೀಲ’ ತತ್ವಗಳು?


1984ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ಪ್ರಕಾರ, ನೇರ ಸಾಕ್ಷ್ಯಗಳಿಲ್ಲದ ಕೊಲೆ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಬೇಕಾದರೆ ಸಾಂದರ್ಭಿಕ ಸಾಕ್ಷ್ಯಗಳ ಸರಪಳಿ ಯಾವುದೇ ಅನುಮಾನಕ್ಕೂ ಅವಕಾಶವಿಲ್ಲದಂತೆ ಸಂಪೂರ್ಣವಾಗಿರಬೇಕು. ಪ್ರತಿಯೊಂದು ಸಾಕ್ಷ್ಯವೂ ಆರೋಪಿಯ ಅಪರಾಧದತ್ತವೇ ಸ್ಪಷ್ಟವಾಗಿ ತೋರಿಸಬೇಕು. ಜೊತೆಗೆ ಬೇರೆ ಯಾವುದೇ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿರಬೇಕು. ಈ ಐದು ಮೂಲಭೂತ ತತ್ವಗಳನ್ನೇ ‘ಪಂಚಶೀಲ’ ಎಂದು ಕರೆಯಲಾಗುತ್ತದೆ.


ತನಿಖೆಯ ಭಾಗವಾಗಿ ಪೊಲೀಸರು ಲೋಹಗಢ ಕೋಟೆಯಲ್ಲಿ ಅಪರಾಧ ನಡೆದ ಸ್ಥಳದ ಮರುಸೃಷ್ಟಿ ನಡೆಸಿದ್ದಾರೆ. ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಘಟನೆ ಹೇಗೆ ನಡೆದಿರಬಹುದು ಎಂಬುದನ್ನು ಪರಿಶೀಲಿಸಲಾಗಿದೆ. ಅಲ್ಲದೆ, ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ವ್ಯಕ್ತಿಯ ನಡೆ ಮತ್ತು ಆರೋಪಿ ಚೇತನ್ ಚೌಧರಿಯ ನಡೆಯನ್ನು ಹೋಲಿಸಲು ಗೈಟ್ ಅನಾಲಿಸಿಸ್ ಪರೀಕ್ಷೆಯನ್ನೂ ನಡೆಸಲಾಗಿದೆ. ಘಟನೆಯ ಮರುಸೃಷ್ಟಿಯ ವೇಳೆ ಮೃತ ಕೇತನ್ ಅಗರ್ವಾಲ್ ಅವರ ತೂಕಕ್ಕೆ ಸಮಾನವಾದ ಡಮ್ಮಿಯನ್ನೂ ಬಳಸಲಾಗಿದೆ.


ಈ ಪ್ರಕರಣದಲ್ಲಿ ಮೊಬೈಲ್ ಕರೆ ವಿವರಗಳು, ಡಿಜಿಟಲ್ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು, ಫೊರೆನ್ಸಿಕ್ ವರದಿಗಳು, ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಪರೀಕ್ಷೆಗಳೇ ಪೊಲೀಸರ ಪ್ರಮುಖ ಅಸ್ತ್ರವಾಗಿವೆ. ಇವೆಲ್ಲವನ್ನು ಒಂದಕ್ಕೊಂದು ಜೋಡಿಸಿ ನ್ಯಾಯಾಲಯದಲ್ಲಿ ದೃಢವಾದ ಸಾಕ್ಷ್ಯ ಸರಪಳಿ ನಿರ್ಮಿಸುವುದು ತನಿಖಾಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.


ಪ್ರಕರಣದ ತನಿಖೆ ಅಂತಿಮ ಹಂತದತ್ತ ಸಾಗುತ್ತಿದ್ದು, ಸಾಂದರ್ಭಿಕ ಸಾಕ್ಷ್ಯಗಳ ಬಲ ಹಾಗೂ ‘ಪಂಚಶೀಲ’ ತತ್ವಗಳನ್ನು ಎಷ್ಟು ಪರಿಣಾಮಕಾರಿಯಾಗಿ ಸಾಬೀತುಪಡಿಸಲಾಗುತ್ತದೆ ಎಂಬುದರ ಮೇಲೆಯೇ ಈ ಬಹುಚರ್ಚಿತ ಕೊಲೆ ಪ್ರಕರಣದ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !