July 1, 2026
Wednesday, July 1, 2026
spot_img

ಕನ್ನಡ ಚಿತ್ರರಂಗದ ರಕ್ಷಣೆಗೆ ‘ಸರ್ಕಾರಿ ಒಟಿಟಿ’ ಆಸರೆ: ಸಿಎಂ ಡಿಕೆಶಿಗೆ ವಾಣಿಜ್ಯ ಮಂಡಳಿ ಬಿಗ್ ರಿಕ್ವೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷೆ ಜಯಮಾಲಾ ನೇತೃತ್ವದ ಚಿತ್ರರಂಗದ ಗಣ್ಯರ ನಿಯೋಗವು ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದೆ. ಈ ನಿಯೋಗದಲ್ಲಿ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು, ಮಾಜಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಗಂಗರಾಜು, ಚಿನ್ನೇಗೌಡ ಹಾಗೂ ನಟ ಸುಂದರ್ ರಾಜ್ ಉಪಸ್ಥಿತರಿದ್ದು, ಸ್ಯಾಂಡಲ್‌ವುಡ್ ಉಳಿವಿಗಾಗಿ ಸುದೀರ್ಘ ಅಹವಾಲು ಸಲ್ಲಿಸಿದರು.

ಸಣ್ಣ ಬಜೆಟ್ ಚಿತ್ರಗಳಿಗೆ ಬೇಕಿದೆ ‘ಸರ್ಕಾರಿ ಒಟಿಟಿ’ ವೇದಿಕೆ

ರಾಜ್ಯದಲ್ಲಿ ವಾರ್ಷಿಕ 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ತೆರೆಕಾಣುತ್ತಿದ್ದರೂ, ಬಹುರಾಷ್ಟ್ರೀಯ ಒಟಿಟಿ (OTT) ಸಂಸ್ಥೆಗಳು ಸಣ್ಣ ಬಜೆಟ್ ಚಿತ್ರಗಳನ್ನು ಕಡೆಗಣಿಸುತ್ತಿವೆ. ಇದರಿಂದ ನಿರ್ಮಾಪಕರು ಕರಗುತ್ತಿರುವುದನ್ನು ಸಿಎಂ ಗಮನಕ್ಕೆ ತಂದ ನಿಯೋಗ, ಕನ್ನಡ ಚಿತ್ರರಂಗದ ರಕ್ಷಣೆಗಾಗಿ ಸರ್ಕಾರವೇ ಸ್ವಂತ ‘ಸರ್ಕಾರಿ ಒಟಿಟಿ ವೇದಿಕೆ’ ಆರಂಭಿಸಬೇಕೆಂದು ವಿಶೇಷವಾಗಿ ಒತ್ತಾಯಿಸಿತು.

ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಉಳಿವಿಗಾಗಿ ಮನವಿ

ಹಿಂದೆ ರಾಜ್ಯದಲ್ಲಿದ್ದ 1,200 ಏಕಪರದೆ ಚಿತ್ರಮಂದಿರಗಳ ಸಂಖ್ಯೆ ಈಗ 400ಕ್ಕೆ ಕುಸಿದಿರುವುದಕ್ಕೆ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಹಳೆಯ ಸೆಲ್ಯುಲಾಯ್ಡ್ ನಿಯಮಗಳ ಬದಲಿಗೆ ಡಿಜಿಟಲ್ ಯುಗಕ್ಕೆ ತಕ್ಕಂತೆ ಷರತ್ತುಗಳನ್ನು ಬದಲಾಯಿಸಬೇಕು ಮತ್ತು ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಮೂಲಕ ಥಿಯೇಟರ್ ಲೈಸೆನ್ಸ್ ನವೀಕರಣಕ್ಕೆ ‘ಏಕಗವಾಕ್ಷಿ ಯೋಜನೆ’ ಜಾರಿಗೆ ತರಬೇಕು ಎಂದು ಕೋರಲಾಗಿದೆ.

ಬಡ್ಡಿ ವಿನಾಯಿತಿ ಮತ್ತು ತೆರಿಗೆ ಸೌಲಭ್ಯಕ್ಕೆ ಬೇಡಿಕೆ

ಹಳೆಯ ಚಿತ್ರಮಂದಿರಗಳ ನವೀಕರಣಕ್ಕಾಗಿ ಶೇ. 4ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ಹೊಸ ಚಿತ್ರಮಂದಿರಗಳ ನಿರ್ಮಾಣವನ್ನು ಪ್ರೋತ್ಸಾಹಿಸಲು ವಿಶೇಷ ತೆರಿಗೆ ವಿನಾಯಿತಿ ನೀಡಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಭೇಟಿಯ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !