July 2, 2026
Thursday, July 2, 2026
spot_img

ಉಕ್ರೇನ್ ಡ್ರೋನ್ ದಾಳಿಗೆ ನಡುಗಿದ ರಷ್ಯಾ: ಇಂಧನ ರಫ್ತು ನಿಲ್ಲಿಸಿ ಭಾರತದಿಂದ ತೈಲ ಖರೀದಿಸುತ್ತಿರುವುದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲೇ ಅತಿ ಹೆಚ್ಚು ಇಂಧನ ಉತ್ಪಾದಿಸುವ ದೇಶಗಳಲ್ಲಿ ಒಂದಾದ ರಷ್ಯಾ, ಇದೀಗ ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿದೆ. ರಷ್ಯಾದ ಪ್ರಮುಖ ತೈಲ ಮೂಲಸೌಕರ್ಯಗಳ ಮೇಲೆ ಉಕ್ರೇನ್ ನಿರಂತರವಾಗಿ ಡ್ರೋನ್ ದಾಳಿ ನಡೆಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಪರಿಣಾಮವಾಗಿ ದೇಶದ 11 ಟೈಮ್ ಜೋನ್‌ಗಳ ವ್ಯಾಪ್ತಿಯಲ್ಲಿ ಪೆಟ್ರೋಲ್ ಕೊರತೆ ಸೃಷ್ಟಿಯಾಗಿದ್ದು, ಬಂಕ್‌ಗಳ ಮುಂದೆ ವಾಹನ ಸವಾರರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಪೆಟ್ರೋಲ್ ಬೆಲೆ ದಾಖಲೆ ಮಟ್ಟಕ್ಕೆ ಏರಿದ್ದು, ರೇಷನಿಂಗ್ (ಪಡಿತರ) ವ್ಯವಸ್ಥೆ ಜಾರಿಗೆ ತರಲಾಗಿದೆ.

ಭಾರತದಿಂದ ರಷ್ಯಾಕ್ಕೆ ಪೆಟ್ರೋಲ್ ರಫ್ತು

ವಿದೇಶಗಳಿಗೆ ಇಂಧನ ರಫ್ತು ಮಾಡುತ್ತಿದ್ದ ರಷ್ಯಾ, ತನ್ನ ದೇಶೀಯ ಮಾರುಕಟ್ಟೆಯ ಬೇಡಿಕೆ ಸರಿದೂಗಿಸಲು ಈಗ ಬೇರೆ ದೇಶಗಳಿಂದ ತೈಲ ಖರೀದಿಸುವ ಅನಿವಾರ್ಯತೆಗೆ ಸಿಲುಕಿದೆ. ಈ ಬಿಕ್ಕಟ್ಟಿನ ನಡುವೆ ರಷ್ಯಾ ಈಗಾಗಲೇ ಭಾರತದಿಂದ ಸಮುದ್ರ ಮಾರ್ಗದ ಮೂಲಕ ಪೆಟ್ರೋಲ್ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ವರದಿಗಳ ಪ್ರಕಾರ, ಕನಿಷ್ಠ 60,000 ಮೆಟ್ರಿಕ್ ಟನ್ ಪೆಟ್ರೋಲ್ ಅನ್ನು ಭಾರತದಿಂದ ರಷ್ಯಾಕ್ಕೆ ರವಾನಿಸಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ರಾಜತಾಂತ್ರಿಕತೆ

ಭಾರತದ ಯಾವ ನಿರ್ದಿಷ್ಟ ತೈಲ ಸಂಸ್ಕರಣಾಗಾರ (Refinery) ಈ ಇಂಧನವನ್ನು ಪೂರೈಸುತ್ತಿದೆ ಎಂಬ ಮಾಹಿತಿ ಇನ್ನು ಅಧಿಕೃತವಾಗಿ ಲಭ್ಯವಾಗಿಲ್ಲ. ಆದರೆ, ರಷ್ಯಾ ತನ್ನ ದೇಶದೊಳಗಿನ ತೈಲ ಬಿಕ್ಕಟ್ಟನ್ನು ತಣಿಸಲು ಸೂಕ್ತ ಬೆಲೆಯಲ್ಲಿ ಇಂಧನ ಒದಗಿಸುವಂತೆ ಭಾರತ ಸೇರಿದಂತೆ ಹಲವು ಸ್ನೇಹಪರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರತದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !