November 10, 2026
Tuesday, November 10, 2026
spot_img

ಬರಪೀಡಿತ ರೈತರಿಗೆ ಸರ್ಕಾರದ ಭರವಸೆ: ಪ್ರತಿಯೊಬ್ಬರಿಗೂ ಕನಿಷ್ಠ 5,000 ರೂ. ಪರಿಹಾರ ಸಿಗಲಿದೆ ಎಂದ ಜಿ. ಪರಮೇಶ್ವರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಮೊದಲ ಕಂತಿನಲ್ಲಿ ಕೆಲ ರೈತರ ಖಾತೆಗೆ 2,000 ಅಥವಾ 2,500 ಮಾತ್ರ ಜಮೆಯಾಗಿರುವುದಕ್ಕೆ ಆತಂಕಪಡುವ ಅಗತ್ಯವಿಲ್ಲ. ಅರ್ಹ ಪ್ರತಿಯೊಬ್ಬ ಬರಪೀಡಿತ ರೈತರಿಗೆ ಕನಿಷ್ಠ 5,000 ಪರಿಹಾರ ನೀಡಲಾಗುವುದು. ಬಾಕಿ ಮೊತ್ತವನ್ನು ಮುಂದಿನ ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬಾಕಿ ಹಣವೂ ರೈತರ ಖಾತೆಗೆ ಜಮೆ

ಮೊದಲ ಕಂತಿನಲ್ಲಿ 2,000 ಪಡೆದ ರೈತರಿಗೆ ಉಳಿದ 3,000 ಹಾಗೂ 2,500 ಪಡೆದವರಿಗೆ ಇನ್ನೂ 2,500 ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಕ್ಟೋಬರ್ 23ರಂದು ಹೊರಡಿಸಿದ ಆದೇಶದಂತೆ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ 2,500 ಬಿಡುಗಡೆ ಮಾಡಲು ಅನುಮತಿ ನೀಡಲಾಗಿತ್ತು. ಅದರಂತೆ ನವೆಂಬರ್ 5ರಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ಒಟ್ಟು 17.43 ಕೋಟಿ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ:

ಕೇಂದ್ರದ SDRF ಮತ್ತು NDRF ಮಾರ್ಗಸೂಚಿಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ 1,500, ನೀರಾವರಿ ಬೆಳೆಗಳಿಗೆ 2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ಕನಿಷ್ಠ ಇನ್‌ಪುಟ್ ಸಬ್ಸಿಡಿ ನಿಗದಿಯಾಗಿದೆ. ಆದರೆ ರಾಜ್ಯ ಸರ್ಕಾರ ಈ ಮಿತಿಯನ್ನು ಮೀರಿ ಭೂಮಿಯ ವಿಸ್ತೀರ್ಣದ ಭೇದವಿಲ್ಲದೆ ಪ್ರತಿ ಅರ್ಹ ರೈತರಿಗೂ ಕನಿಷ್ಠ 5,000 ನೀಡಲು ನಿರ್ಧರಿಸಿದೆ. ಬೆಳೆ ನಷ್ಟದ ಪ್ರಮಾಣ ಮತ್ತು ನಿಯಮಗಳ ಆಧಾರದಲ್ಲಿ 5,000ರಿಂದ 60,000ವರೆಗೆ ಪರಿಹಾರ ಸಿಗುವ ಸಾಧ್ಯತೆಯೂ ಇದೆ.

ಅಧಿಕಾರಿಗಳಿಗೆ ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಇನ್ನೊಂದೆಡೆ, ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರೈತರಿಗೆ ಭರವಸೆ ನೀಡಿದ ಪೂರ್ಣ 5,000 ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Must Read

Skip to toolbar