July 2, 2026
Thursday, July 2, 2026
spot_img

ಪಾಕಿಸ್ತಾನದಲ್ಲಿ ಐತಿಹಾಸಿಕ ಗುರುದ್ವಾರ ಧ್ವಂಸ: ತಕ್ಷಣವೇ ಪುನರ್ನಿರ್ಮಿಸಲು ಪಾಕ್‌ಗೆ ಭಾರತದ ಗಡುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ 125 ವರ್ಷಗಳಷ್ಟು ಹಳೆಯದಾದ ಪವಿತ್ರ ‘ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್’ ಅನ್ನು ಸ್ಥಳೀಯ ಉದ್ಯಮಿಯೊಬ್ಬರು ಅಕ್ರಮವಾಗಿ ಕೆಡವಿ ಹಾಕಿದ್ದಾರೆ. ಲಾಹೋರ್‌ನಿಂದ 70 ಕಿ.ಮೀ ದೂರದ ಫಾರೂಕಾಬಾದ್‌ನಲ್ಲಿ ಜೂನ್ 24 ರ ರಾತ್ರಿ ಈ ಕೃತ್ಯ ನಡೆದಿದ್ದು, ಅಲ್ಪಸಂಖ್ಯಾತ ಸಿಖ್ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಭಾರತ ಸರ್ಕಾರದ ತೀವ್ರ ಖಂಡನೆ

ಈ ವಿಧ್ವಂಸಕ ಕೃತ್ಯವನ್ನು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬಲವಾಗಿ ಖಂಡಿಸಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ನಿರಂತರವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ. ಅಲ್ಲದೆ, ಆರೋಪಿಗಳನ್ನು ಬಂಧಿಸಿ, ಧ್ವಂಸಗೊಂಡ ಗುರುದ್ವಾರವನ್ನು ಪಾಕ್ ಸರ್ಕಾರವೇ ಪುನರ್ನಿರ್ಮಿಸಬೇಕು ಎಂದು ಭಾರತ ಆಗ್ರಹಿಸಿದೆ.

ಸರ್ಕಾರದ ಭರವಸೆ ಮತ್ತು ಸ್ಥಳೀಯರ ಆಕ್ಷೇಪ

ಯಾವುದೇ ಅನುಮತಿ ಇಲ್ಲದೆ ಕಟ್ಟಡ ನೆಲಸಮ ಮಾಡಲಾಗಿದ್ದು, ಸಿಖ್ಖರ ಬೃಹತ್ ಪ್ರತಿಭಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತ ಸಚಿವ ರಮೇಶ್ ಸಿಂಗ್ ಅರೋರಾ ಸ್ಥಳಕ್ಕೆ ಭೇಟಿ ನೀಡಿ, ಗುರುದ್ವಾರದ ಪುನಃಸ್ಥಾಪನೆ ಕಾರ್ಯವನ್ನು ತಕ್ಷಣವೇ ಆರಂಭಿಸುವುದಾಗಿ ಘೋಷಿಸಿದ್ದಾರೆ. ಆದರೆ, ಕಳೆದ 80 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಸ್ಥಳೀಯ ವ್ಯಾಪಾರಿಗಳು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ತಮಗೆ ಪರ್ಯಾಯ ವಸತಿ ಮತ್ತು ಜೀವನೋಪಾಯ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !