ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ತಡವಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆರಂಭದಲ್ಲಿ 2026ರ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟ ಈ ಚಿತ್ರದ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಯಾವುದೇ ಅಧಿಕೃತ ದಿನಾಂಕ ಪ್ರಕಟಿಸದ ಹಿನ್ನೆಲೆ, ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವದಂತಿಗಳು ಹರಿದಾಡುತ್ತಿವೆ. ಜೂನ್‌ನಲ್ಲಿ ಚಿತ್ರ ತೆರೆಕಾಣಲಿದೆ ಎಂಬ ಸುದ್ದಿ ಈಗಾಗಲೇ ಸುಳ್ಳಾಗಿದೆ.
ಸೆನ್ಸಾರ್ ಮಂಡಳಿಯಿಂದ ‘A’ ಸರ್ಟಿಫಿಕೇಟ್
ಈಗ ಕೇಳಿಬರುತ್ತಿರುವ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ, ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆ ಎನ್ನಲಾಗಿದೆ. ಸಿನಿಮಾ ಈಗಾಗಲೇ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ವದಂತಿ ಇರುವುದರಿಂದ, ಚಿತ್ರತಂಡ ಕೇವಲ ಒಂದೆರಡು ವಾರಗಳ ಕಾಲ ಪ್ರದರ್ಶನ ಕಂಡರೆ ಸಾಕು ಎಂಬ ಯೋಚನೆಯಲ್ಲಿದೆ ಎನ್ನಲಾಗಿದೆ. ಹೀಗಾಗಿ ಜುಲೈ ಮಧ್ಯಭಾಗ ಅಥವಾ ಆಗಸ್ಟ್ 7 ರಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಬಿಡುಗಡೆಗೂ 20 ದಿನ ಮುಂಚಿತವಾಗಿ ಈ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ
ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯದಲ್ಲೇ ನಿರ್ಮಾಣ ಸಂಸ್ಥೆ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.



