ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯನ್ನು ಇನ್ನು ಹೆಚ್ಚು ಸುಗಮಗೊಳಿಸಲು ಮತ್ತು ಸಾರ್ವಜನಿಕರ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೂತನವಾಗಿ ಆರಂಭಿಸಲಾಗಿರುವ ‘ಪ್ರಜಾ ಸೇವಾ ಇಲಾಖೆ’ಗೆ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಮಹತ್ವದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಒಟ್ಟು ಐದು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹುದ್ದೆಗಳಿಗೆ ನಿಯೋಜಿಸಿದೆ.
ಸರ್ಕಾರದ ಆದೇಶದನ್ವಯ ವರ್ಗಾವಣೆಗೊಂಡಿರುವ 5 ಪ್ರಮುಖ ಐಎಎಸ್ ಅಧಿಕಾರಿಗಳ ವಿವರ:
ಹರ್ಷ ಗುಪ್ತರನ್ನು ನೂತನ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ. ಇದರೊಂದಿಗೆ, ಅವರು ಪ್ರಸ್ತುತ ನಿರ್ವಹಿಸುತ್ತಿರುವ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಮುಂದುವರಿಸಲಿದ್ದಾರೆ.
ಡಾ. ರಾಗಪ್ರಿಯಾ ಆರ್ ಇಷ್ಟು ದಿನ ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಕಾರ್ಮಿಕ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಡಾ. ಗೋಪಾಲ ಕೃಷ್ಣ ಎಚ್.ಎನ್ಇವರನ್ನು ಕಾರ್ಮಿಕ ಇಲಾಖೆಯ ಆಯುಕ್ತ ಹುದ್ದೆಯಿಂದ ಮುಕ್ತಗೊಳಿಸಿ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಇವರು ಈ ಹಿಂದೆ ಈ ಹುದ್ದೆಯಲ್ಲಿದ್ದ ಮಂಜುಶ್ರೀ ಎನ್. ಸ್ಥಾನವನ್ನು ತುಂಬಲಿದ್ದಾರೆ.
ಡಾ. ಹರೀಶ್ ಕುಮಾರ್ ಕೆ ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು ಖಾಲಿ ಇದ್ದ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿನೇಮಿಸಲಾಗಿದೆ.
ಮಂಜುಶ್ರೀ ಎನ್ಕಾಲೇಜು ಶಿಕ್ಷಣ ಆಯುಕ್ತರಾಗಿದ್ದ ಇವರನ್ನು ವರ್ಗಾವಣೆ ಮಾಡಲಾಗಿದ್ದು, ಸದ್ಯಕ್ಕೆ ಯಾವುದೇ ಹುದ್ದೆಯನ್ನು ತೋರಿಸಲಾಗಿಲ್ಲ.
ಇದನ್ನೂ ಓದಿ:
ಹೊಸ ಇಲಾಖೆ:
ಸಾರ್ವಜನಿಕರ ಸೇವೆಗಳನ್ನು ಇನ್ನು ಹೆಚ್ಚು ಸುಲಭವಾಗಿ ತಲುಪಿಸಲು ಸರ್ಕಾರ ‘ಪ್ರಜಾಸೇವಾ ಇಲಾಖೆ’ಯನ್ನು ನೂತನವಾಗಿ ಸ್ಥಾಪಿಸಿದೆ. ಅಧಿಕಾರಿಗಳ ವೈಯಕ್ತಿಕ ಮನವಿ ಹಾಗೂ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.



