ಹೊಸದಿಗಂತ ವರದಿ ಬೆಳಗಾವಿ :
ಇಲ್ಲಿನ ಮಚ್ಚೆ ಗ್ರಾಮ ಕೈಗಾರಿಕಾ ವಲಯದ ‘ಪೊಜಿಸ್ಟ್ರಾನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್’ (ಪಾಸಿಟ್ರಾನ್ ಫ್ಯಾಕ್ಟರಿ) ಕಂಪನಿಯಲ್ಲಿ ಗುರುವಾರ ಏಕಾಏಕಿ ಬೆಂಕಿ ಅವಘಡ ಸಂಭವಿಸಿತು. ಹಲವು ಕಾರ್ಮಿಕರು ಗಾಯಗೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಅಗ್ನಿಶಾಮಕ ದಳ, ಎಸ್ಡಿಆರ್ಎಫ್, ಹೋಮ್ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್ ಜಂಟಿ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ, ಅತ್ಯಂತ ಸಾಹಸಮಯವಾಗಿ ಕಾರ್ಯಾಚರಣೆ ನಡೆಸಿ ಸಿಲುಕಿಕೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದವು.
ಹಾಗಂತ ಗಾಬರಿಯಾಗಬೇಕಿಲ್ಲ, ಇದು ಸಾರ್ವಜನಿಕರಲ್ಲಿ ಮತ್ತು ಕೈಗಾರಿಕಾ ಕಾರ್ಮಿಕರಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಅಣುಕು ಪ್ರದರ್ಶನ ವಾಗಿತ್ತು ಎಂದು ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆದೇಶದನ್ವಯ, ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಜಾಗೃತಿ ಕಾರ್ಯಕ್ರಮವು ಬೆಳಗಾವಿಯ ಮಚ್ಚೆ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಸುಧಾರಿತ ತಂತ್ರಜ್ಞಾನದ ತಾಲೀಮು: ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ್ ಮತ್ತು ಸ್ಟೇಷನ್ ಆಫೀಸರ್ ಶಿವಾಜೀರಾವ್ ಕೊರವಿ ಅವರ ನೇರ ಮಾರ್ಗದರ್ಶನದಲ್ಲಿ ಈ ತಾಲೀಮು ನಡೆಯಿತು. ಕಂಪನಿಯಲ್ಲಿ ಅಳವಡಿಸಲಾಗಿರುವ ಸ್ಮೋಕ್ ಡಿಟೆಕ್ಟರ್, ಹೈಡ್ರೆಂಟ್ ಸಿಸ್ಟಮ್ ಹಾಗೂ ಹೋಸ್ ರೀಲ್ಗಳನ್ನು ಬಳಸಿ ಬೆಂಕಿ ನಂದಿಸುವ ಪ್ರಕ್ರಿಯೆಯನ್ನು ಪ್ರದರ್ಶಿಸಲಾಯಿತು. ಬೆಂಕಿಯ ಮಧ್ಯೆ ಸಿಲುಕಿಕೊಂಡವರನ್ನು ಸುರಕ್ಷಿತವಾಗಿ ರಕ್ಷಿಸುವುದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು ಹಾಗೂ ಲೇಕೂ ಆಸ್ಪತ್ರೆಯ ಆಂಬ್ಯುಲೆನ್ಸ್ ವ್ಯವಸ್ಥೆಯ ಮೂಲಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸುವ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಕಾಂಬಳೆ ಮತ್ತು ಸಿಬ್ಬಂದಿ ಹಾಗೂ ಸಿವಿಲ್ ಡಿಫೆನ್ಸ್ ತಂಡ ಸಕ್ರಿಯವಾಗಿ ಭಾಗವಹಿಸಿತ್ತು.

ರಾಜ್ಯಾದ್ಯಂತ ಜಾಗೃತಿ ಅಭಿಯಾನ: ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ್ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಅಗ್ನಿಶಾಮದ ಅಧಿಕಾರಿ ರಂಗನಾಥ್ ಅವರು,”ರಾಜ್ಯದ 30 ಜಿಲ್ಲೆಗಳಲ್ಲಿ ಇದು ಅಗ್ನಿ ಅನಾಹುತಗಳ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಈ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಾರ್, ರೆಸ್ಟೋರೆಂಟ್ಗಳು, ಕೈಗಾರಿಕೆಗಳು, ಶಾಲಾ-ಕಾಲೇಜುಗಳು ಹಾಗೂ ಆಸ್ಪತ್ರೆಗಳಲ್ಲಿ ದಿನನಿತ್ಯ ಸಂಭವಿಸುವ ಅಗ್ನಿ ಅವಘಡಗಳಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಇಲಾಖೆಯ ಕಾರ್ಯಾಚರಣೆ ವಿಧಾನದ ಕುರಿತು ಜನರಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ” ಎಂದರು.
ಗಾಬರಿಯಾಗದೆ ಮುನ್ನೆಚ್ಚರಿಕೆ ವಹಿಸಿ: ಕಮಾಂಡಂಟ್ ನಾಗೇಶ್ ಯಡಾಲ್ ಕಮಾಂಡಂಟ್ ನಾಗೇಶ್ ಯಡಾಲ್ ಮಾತನಾಡಿ, ಹಿರಿಯ ಅಧಿಕಾರಿಗಳ ಆದೇಶದಂತೆ ಜುಲೈ 2 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಂಟಿ ಮಾಕ್ ಡ್ರಿಲ್ ಆಯೋಜಿಸಲಾಗಿದೆ. ಅಗ್ನಿ ಅವಘಡಗಳು ಅಥವಾ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರಕ್ಷಣಾ ತಂಡಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಾರ್ಮಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಗಾಬರಿಯಾಗದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ರಕ್ಷಣಾ ತಂಡಗಳನ್ನು ಸಂಪರ್ಕಿಸಿ ಅವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಕ್ಷಣಾ ತಂಡಗಳಿಗೆ ಧನ್ಯವಾದ ಅರ್ಪಿಸಿದ ಕಾರ್ಖಾನೆ ಆಡಳಿತ ಮಂಡಳಿ: ಕಾರ್ಖಾನೆಯ ಪ್ರಮುಖರಾದ ವೀರಭದ್ರ ಹೆಬ್ಬಳ್ಳಿ ಅವರು ಮಾತನಾಡಿ, “ನಮ್ಮ ಕಂಪನಿಯೊಳಗೆ ಬೆಂಕಿ ಅವಘಡ ಸಂಭವಿಸಿದ ತಕ್ಷಣ ಸೆಕ್ಯೂರಿಟಿಗೆ ತಿಳಿಸಿ, ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದವು. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದು, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ ಮೂಲಕ ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಮತ್ತು ಹೇಗೆ ಪಾರಾಗಬೇಕು ಎಂಬ ಬಗ್ಗೆ ಉತ್ತಮ ಅರಿವು ಮೂಡಿಸಿದ್ದಾರೆ,” ಎಂದು ಹೇಳುತ್ತಾ ಪಾಸಿಟ್ರಾನ್ ಇಂಜಿನಿಯರಿಂಗ್ ಕಾರ್ಪೊರೇಷನ್ ಪರವಾಗಿ ಎಲ್ಲಾ ತಂಡಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸತೀಶ್ ಕುಲಕರ್ಣಿ, ಕಂಪನಿಯ ಹಿರಿಯ ಅಧಿಕಾರಿಗಳು ಹಾಗೂ ಸೇಫ್ಟಿ ಆಫೀಸರ್ ಹೆಡ್ ಉಪಸ್ಥಿತರಿದ್ದರು. ಈ ಸಾಹಸಮಯ ಅಣುಕು ಪ್ರದರ್ಶನವು ಕಾರ್ಮಿಕರಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.



