ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರಗಾಲ ಎನ್ನುವುದು ಯಾವುದೇ ಒಂದು ನಿರ್ದಿಷ್ಟ ಪಕ್ಷದ ಸಮಸ್ಯೆಯಲ್ಲ, ಬದಲಾಗಿ ಅದು ಇಡೀ ರಾಜ್ಯದ ಜ್ವಲಂತ ಸಮಸ್ಯೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದ್ದು, ಈಗಾಗಲೇ ಬೆಳೆದಿರುವ ಬೆಳೆಗಳು ಒಣಗುವ ಸ್ಥಿತಿ ತಲುಪಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಇಟ್ಟಿರುವ 8 ಪ್ರಮುಖ ಬೇಡಿಕೆಗಳು:
ರಾಜ್ಯದ ಸುಮಾರು 150 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಭೀತಿ ಇರುವುದರಿಂದ, ಆ ಪ್ರದೇಶಗಳನ್ನು ತಕ್ಷಣವೇ ಅಧಿಕೃತವಾಗಿ ‘ಬರಪೀಡಿತ ಪ್ರದೇಶ’ಗಳೆಂದು ಘೋಷಿಸಬೇಕು.
ಮಳೆ ಅಭಾವದಿಂದ ಒಣಗುತ್ತಿರುವ ಬೆಳೆಗಳ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆಯಿಂದ ತಕ್ಷಣವೇ ಜಂಟಿಯಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು.
ಸಂಕಷ್ಟದಲ್ಲಿರುವ ಅನ್ನದಾತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ನೆರವಾಗಲು ಸರ್ಕಾರದಿಂದ ತಕ್ಷಣವೇ ಮಧ್ಯಕಾಲೀನ ಪರಿಹಾರ ಧನ ಬಿಡುಗಡೆ ಮಾಡಬೇಕು.
ಜಲಾಶಯಗಳ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿನ ಅಭಾವವಿರುವ ಹಳ್ಳಿಗಳನ್ನು ಗುರುತಿಸಿ, ಟ್ಯಾಂಕರ್ ನೀರು ಪೂರೈಕೆ ಹಾಗೂ ಬೋರ್‌ವೆಲ್ ಪುನಶ್ಚೇತನಕ್ಕೆ ತುರ್ತು ನಿಧಿ ಬಿಡುಗಡೆ ಮಾಡಬೇಕು.
ಪ್ರಸ್ತುತ ಕೃಷಿ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರು ಇಲ್ಲದಿರುವುದರಿಂದ, ರೈತರಿಗೆ ಮಾರ್ಗದರ್ಶನ ನೀಡಲು ತಕ್ಷಣವೇ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಬೇಕು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ‘ವಿಶೇಷ ಬರ ನಿರ್ವಹಣಾ ಕಾರ್ಯಪಡೆ’ಯನ್ನು ರಚಿಸಬೇಕು.
ನಷ್ಟ ಅನುಭವಿಸಿದ ರೈತರಿಗೆ ಬೆಳೆ ವಿಮೆ ಹಣ ಸಕಾಲದಲ್ಲಿ ಸಿಗುವಂತೆ ಮಾಡಬೇಕು ಮತ್ತು ಮರುಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಬೇಕು.
ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ಬರ ಪರಿಹಾರ ನಿಧಿ ಮತ್ತು ಆರ್ಥಿಕ ನೆರವು ಪಡೆಯಲು ಅಗತ್ಯವಿರುವ ಎಲ್ಲಾ ಅಧಿಕೃತ ದಾಖಲೆಗಳು ಹಾಗೂ ವರದಿಗಳನ್ನು ಮಾರ್ಗಸೂಚಿಗಳ ಅನ್ವಯ ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಬೇಕು.
ಇದನ್ನೂ ಓದಿ:
ರಾಜಕೀಯಕ್ಕಿಂತ ಜನಹಿತ ಮುಖ್ಯ:
ರೈತರ ಬದುಕು ಮತ್ತು ಗ್ರಾಮೀಣ ಆರ್ಥಿಕತೆಯ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯವಾಗಬೇಕು ಎಂದು ಅಶೋಕ್ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಆತಂಕ ಮೂಡಿದೆ.ಪರಿಸ್ಥಿತಿ ಇನ್ನಷ್ಟು ಕೈ ಮೀರುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ತುರ್ತು ಪರಿಸ್ಥಿತಿಯ ಯೋಜನೆಯನ್ನು ಜಾರಿಗೆ ತರಬೇಕು ಎಂದು ವಿಪಕ್ಷ ಒತ್ತಾಯಿಸಿದೆ.



