July 2, 2026
Thursday, July 2, 2026
spot_img

ಭಾರತದಲ್ಲಿ ಭಯೋತ್ಪಾದಕ ಸಂಚು ಭೇದಿಸಿದ ವಿಶೇಷ ದಳ: ಐಎಸ್‌ಐ ಜಾಲದ ನಾಲ್ವರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ರಾಜಧಾನಿಯಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಸಂಚನ್ನು ದೆಹಲಿ ಪೊಲೀಸರ ವಿಶೇಷ ಘಟಕ ಭೇದಿಸಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರು ಪಂಜಾಬ್‌ನಲ್ಲಿ ಹಾಗೂ ಒಬ್ಬ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಐಎಸ್‌ಐ ಸೂಚನೆಯಂತೆ ಕಾರ್ಯಾಚರಣೆ

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಬಂಧಿತರು ಪಾಕಿಸ್ತಾನ ಮೂಲದ ಐಎಸ್‌ಐ ನಿರ್ವಾಹಕ ಶಹಜಾದ್ ಭಟ್ಟಿಯ ಸೂಚನೆಗಳಂತೆ ಕಾರ್ಯನಿರ್ವಹಿಸುತ್ತಿದ್ದರು. ದೆಹಲಿ–ಎನ್‌ಸಿಆರ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲಾಗಿದ್ದು, ಪಂಜಾಬ್‌ನ ಕೆಲ ಯುವಕರನ್ನು ಈ ಜಾಲದಲ್ಲಿ ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:

ಶಸ್ತ್ರಾಸ್ತ್ರ, ಮೊಬೈಲ್ ವಶ

ಗುಪ್ತಚರ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ ಬಂಧಿತರಿಂದ ವಿದೇಶಿ ನಿರ್ಮಿತ ಪಿಸ್ತೂಲ್‌ಗಳು, ಜೀವಂತ ಕಾರ್ಟ್ರಿಡ್ಜ್‌ಗಳು ಹಾಗೂ ಹಲವು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದೆ.

ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !