July 2, 2026
Thursday, July 2, 2026
spot_img

ಸಾರಿಗೆ ನೌಕರರಿಗೆ ಗುಡ್‌ ನ್ಯೂಸ್‌: ಮೂಲ ವೇತನ ಹೆಚ್ಚಿಸಿದ ರಾಜ್ಯ ಸರ್ಕಾರ; ಜುಲೈನಿಂದಲೇ ಹೊಸ ವೇತನ ಜಾರಿ!

ಹೊಸದಿಗಂಗತ ಡಿಜಿಟಲ್‌ ಡೆಸ್ಕ್:

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಲಕ್ಷಾಂತರ ನೌಕರರ ಬಹುದಿನಗಳ ಬೇಡಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸಾರಿಗೆ ಸಂಸ್ಥೆಯ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಾರಿಗೆ ಕುಟುಂಬಕ್ಕೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಮೂಲ ವೇತನವನ್ನು  ಗಣನೀಯವಾಗಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ವೇತನವು ಈ ತಿಂಗಳಿನಿಂದಲೇ ನೌಕರರ ಖಾತೆಗೆ ಜಮೆಯಾಗಲಿದೆ.

 ಎಷ್ಟು ಹೆಚ್ಚಳ? ಯಾರಿಗೆ ಅನ್ವಯ?

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನೌಕರರ ಮೂಲ ವೇತನದಲ್ಲಿ ಶೇ. 12.5 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕರಣೆಯು 2025ರ ಮಾರ್ಚ್ 31ರಂದು ನೌಕರರು ಪಡೆಯುತ್ತಿದ್ದ ಮೂಲ ವೇತನದ ಆಧಾರದ ಮೇಲೆ ಅನ್ವಯವಾಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ನೌಕರರಿಗೆ ಈ ಸೌಲಭ್ಯ ಸಿಗಲಿದೆ. ರಾಜ್ಯದ ಸುಮಾರು 1.05 ಲಕ್ಷಕ್ಕೂ ಹೆಚ್ಚು ಸಾರಿಗೆ ನೌಕರರು ಮತ್ತು ಅಧಿಕಾರಿಗಳಿಗೆ ಈ ನಿರ್ಧಾರದಿಂದ ನೇರ ಅನುಕೂಲವಾಗಲಿದೆ.

ಇದನ್ನೂ ಓದಿ:

ಯಾವಾಗಿನಿಂದ ಜಾರಿಗೆ ಬರಲಿದೆ?

2026ರ ಜುಲೈ 1ರಿಂದ ಜಾರಿಗೆ ಬರುವಂತೆ ಅಂದರೆ ಈ ತಿಂಗಳಿನ ವೇತನದ ಹಣದಲ್ಲೇ ನೌಕರರಿಗೆ ಪರಿಷ್ಕೃತ ಸಂಬಳ ಸಿಗಲಿದೆ. ಹೊಸ ವೇತನ ಪರಿಷ್ಕರಣೆಯು 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 2025ರ ಏಪ್ರಿಲ್‌ನಿಂದ ಬಾಕಿ ಇರುವ ಹಿಂಬಾಕಿಯ ಮೊದಲ ಕಂತಿನ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಉಳಿದ ಮೊತ್ತವನ್ನು ನಿಗಮಗಳ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಮುಂದಿನ ತಿಂಗಳುಗಳಲ್ಲಿ ಪಾವತಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !