July 2, 2026
Thursday, July 2, 2026
spot_img

ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರ ಧ್ವಂಸ: ಭುಗಿಲೆದ್ದ ಸಿಖ್ ಸಮುದಾಯದ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸುಮಾರು 125 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಗೊಂಡ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಖಾಸಗಿ ಉದ್ಯಮಿಯೊಬ್ಬರು ಅಗತ್ಯ ಅನುಮತಿ ಪಡೆಯದೆ ಕಟ್ಟಡವನ್ನು ನೆಲಸಮಗೊಳಿಸಿದ್ದರೆಂಬ ಆರೋಪ ಕೇಳಿಬಂದಿದ್ದು, ಈ ಬೆಳವಣಿಗೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಭಾರತದ ತೀವ್ರ ಪ್ರತಿಕ್ರಿಯೆ

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅಲ್ಪಸಂಖ್ಯಾತರ ಧಾರ್ಮಿಕ ತಾಣಗಳ ಮೇಲಿನ ದಾಳಿಗಳು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವುದರ ಜೊತೆಗೆ, ಧ್ವಂಸಗೊಂಡ ಗುರುದ್ವಾರವನ್ನು ಪಾಕಿಸ್ತಾನ ಸರ್ಕಾರವೇ ಪುನರ್‌ನಿರ್ಮಿಸಬೇಕು ಎಂದು ಭಾರತ ಒತ್ತಾಯಿಸಿದೆ.

ಇದನ್ನೂ ಓದಿ:

ಪ್ರತಿಭಟನೆ ಬಳಿಕ ಸರ್ಕಾರದ ಕ್ರಮ

ಘಟನೆ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಸಿಖ್ ಸಮುದಾಯ ಪ್ರತಿಭಟನೆ ನಡೆಸಿತು. ಬಳಿಕ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಸೂಚನೆ ಮೇರೆಗೆ ಅಲ್ಪಸಂಖ್ಯಾತ ಸಚಿವ ರಮೇಶ್ ಸಿಂಗ್ ಅರೋರಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧಾರ್ಮಿಕ ತಾಣದ ಪುನಃಸ್ಥಾಪನೆ ಕಾರ್ಯವನ್ನು ಶೀಘ್ರ ಆರಂಭಿಸುವ ಭರವಸೆಯನ್ನೂ ನೀಡಿದ್ದಾರೆ.

ಪುನರ್‌ನಿರ್ಮಾಣಕ್ಕೂ ಎದುರಾಯಿತು ವಿರೋಧ

ಗುರುದ್ವಾರದ ಸುತ್ತಲಿನ ಕೆಲವು ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳು ಪುನರ್‌ನಿರ್ಮಾಣ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳಿಂದ ಈ ಪ್ರದೇಶದಲ್ಲಿ ತಮ್ಮ ವ್ಯಾಪಾರ ಹಾಗೂ ವಾಸಸ್ಥಳವಿರುವುದರಿಂದ, ಗುರುದ್ವಾರ ಮರುನಿರ್ಮಾಣವಾದರೆ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಅವರು ಸರ್ಕಾರದ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಧಾರ್ಮಿಕ ತಾಣದ ಪುನಃಸ್ಥಾಪನೆ ಜೊತೆಗೆ ಸ್ಥಳೀಯರ ಪುನರ್ವಸತಿಯ ಪ್ರಶ್ನೆಯೂ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !