ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನೇ ಬೆಚ್ಚಿಬೀಳಿಸಿರುವ ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರು ಮಹತ್ವದ ಹೆಜ್ಜೆಯಿಟ್ಟಿದ್ದು, ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಅವರಿಗೆ ಲೈ ಡಿಟೆಕ್ಟರ್ (ಪಾಲಿಗ್ರಾಫ್) ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಕೋರಿದ್ದಾರೆ.
ತನಿಖೆಗೆ ಸ್ಪಷ್ಟತೆ ತರಲು ಈ ಪರೀಕ್ಷೆ ಅಗತ್ಯ ಎಂದು ಪೊಲೀಸರು ವಾದಿಸಿದ್ದಾರೆ.
ಕೇತನ್ ಅಗರ್ವಾಲ್ ಅವರನ್ನು ಪುಣೆಯ ಲೋಹಗಢ ಕೋಟೆಯ ಕಣಿವೆಗೆ ತಳ್ಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ ಸಿಯಾ ಮತ್ತು ಚೇತನ್ ಇಬ್ಬರೂ ಜುಲೈ 3ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದಲ್ಲಿ ನೇರ ಪ್ರತ್ಯಕ್ಷ ಸಾಕ್ಷಿಗಳಿಲ್ಲದ ಕಾರಣ ಡಿಜಿಟಲ್ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು, ಫೋನ್ ದಾಖಲೆಗಳು ಹಾಗೂ ವೈಜ್ಞಾನಿಕ ತನಿಖೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ;
ತನಿಖೆಯ ವೇಳೆ ಇಬ್ಬರು ಆರೋಪಿಗಳ ಹೇಳಿಕೆಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಪಾಲಿಗ್ರಾಫ್ ಪರೀಕ್ಷೆಯಿಂದ ಹೊಸ ಮಾಹಿತಿ ಲಭಿಸುವ ನಿರೀಕ್ಷೆಯಿದೆ. ಪರೀಕ್ಷೆಯ ಫಲಿತಾಂಶಗಳನ್ನು ಇತರೆ ಸಾಕ್ಷ್ಯಗಳೊಂದಿಗೆ ಹೋಲಿಕೆ ಮಾಡಿ ತನಿಖೆಯನ್ನು ಮುಂದುವರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದೇ ವೇಳೆ, ಕೊಲೆ ನಡೆದ ಸ್ಥಳದಲ್ಲಿ ಇಬ್ಬರು ಆರೋಪಿಗಳನ್ನು ಪ್ರತ್ಯೇಕವಾಗಿ ಕರೆದೊಯ್ದು ಘಟನೆ ಮರು ಸೃಷ್ಟಿ ನಡೆಸಲಾಗಿದೆ. ತನಿಖೆಯಲ್ಲಿ, ಕೇತನ್ ಅವರ ಮೊಬೈಲ್ ಕೆಲವು ಸಮಯ ಸಿಯಾ ಬಳಿಯೇ ಇದ್ದಿದ್ದೂ ಬೆಳಕಿಗೆ ಬಂದಿದ್ದು, ಅದರಲ್ಲಿನ ಮಾಹಿತಿ ಅಳಿಸಲಾಗಿದೆಯೇ ಅಥವಾ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆಯೇ ಎಂಬ ಬಗ್ಗೆ ಕೂಡಾ ಡಿಜಿಟಲ್ ಫೊರೆನ್ಸಿಕ್ ತನಿಖೆ ನಡೆಯುತ್ತಿದೆ.



