ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರುದ ಖಾಸಗಿ ಡೇಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲಿನ ಅಮಾನವೀಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಮಕ್ಕಳ ಸುರಕ್ಷತೆ ಕುರಿತು ಮತ್ತೆ ಗಂಭೀರ ಚರ್ಚೆ ಆರಂಭವಾಗಿದೆ.
ಸಿಸಿಟಿವಿಯಲ್ಲಿ ಬಯಲಾದ ದೌರ್ಜನ್ಯ
ಬ್ರೂಕ್ಫೀಲ್ಡ್ನಲ್ಲಿರುವ ಐಟಿ ಕಂಪನಿಯ ಆವರಣದ ಡೇಕೇರ್ ಕೇಂದ್ರದಲ್ಲಿ ಎರಡು ರಿಂದ ಮೂರು ವರ್ಷದ ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸಿರುವ ಆರೋಪ ಕೇಳಿಬಂದಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಬಳಿಕ ಮಂಜುಳಾ ಮತ್ತು ವಿಜಯಲಕ್ಷ್ಮಿ ಎಂಬ ಸಿಬ್ಬಂದಿಯನ್ನು ಪೊಲೀಸರು ಗುರುತಿಸಿ ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ:
ಬೆಚ್ಚಿಬೀಳಿಸಿದ ದೃಶ್ಯಗಳು
ತನಿಖೆಯಲ್ಲಿ ಮಕ್ಕಳನ್ನು ಹೆದರಿಸುವುದು, ಬಲವಂತವಾಗಿ ವಾಷಿಂಗ್ ಮೆಷಿನ್ ಒಳಗೆ ಕೂರಿಸುವುದು, ಶೌಚಾಲಯದಲ್ಲಿ ಅವಮಾನಕರವಾಗಿ ವರ್ತಿಸುವುದು ಹಾಗೂ ಅಳುತ್ತಿದ್ದ ಮಕ್ಕಳನ್ನು ಬಾತ್ರೂಮ್ನಲ್ಲಿ ಕೂಡಿ ಹಾಕಿದ ದೃಶ್ಯಗಳು ಬೆಳಕಿಗೆ ಬಂದಿವೆ. ಈ ವಿಡಿಯೊಗಳು ವೈರಲ್ ಆದ ಬಳಿಕ ಪೋಷಕರಲ್ಲಿ ತೀವ್ರ ಆತಂಕ ಉಂಟಾಗಿದೆ.
ತನಿಖೆಗೆ ಸಂಪೂರ್ಣ ಸಹಕಾರ
ಪ್ರಕರಣ ಸಂಬಂಧ ಐದು ಮಹಿಳಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಡೇಕೇರ್ ಕಾರ್ಯನಿರ್ವಹಿಸುತ್ತಿದ್ದ ಐಟಿ ಸಂಸ್ಥೆ ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಸುರಕ್ಷತೆಯೇ ಮೊದಲ ಆದ್ಯತೆ ಎಂದು ತಿಳಿಸಿದ್ದು, ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.



