ಹೊಸದಿಗಂತ ವರದಿ ದಾವಣಗೆರೆ:
ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದಲ್ಲಿ ಗುರುವಾರ ವರದಿಯಾಗಿದೆ.
ನಗರದ ಟೀಂ ಅಕಾಡೆಮಿಯ ವಿದ್ಯಾರ್ಥಿನಿ ರಂಜಿತಾ ಮೃತ ವಿದ್ಯಾರ್ಥಿನಿ. ನಾಲ್ಕು ದಿನಗಳ ಹಿಂದೆ ತನ್ನ ಊರಿಗೆ ಹೋಗಿದ್ದ ರಂಜಿತಾ ಬುಧವಾರ ಸಂಜೆ 5.30ರ ಸುಮಾರಿಗೆ ಟೀಂ ಅಕಾಡೆಮಿ ಕಾಲೇಜಿನ ಹಾಸ್ಟೆಲ್ ಗೆ ಮರಳಿದ್ದಳು.
ರಾತ್ರಿ 8.30ರ ವೇಳೆ ರಂಜಿತಾ ಸಹಪಾಠಿಗಳು ರೂಂ ಗೆ ಹೋದಾಗ ಬಾಗಿಲು ತೆರೆಯಲಿಲ್ಲ. ವಿಷಯ ತಿಳಿದ ವಾರ್ಡನ್ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಸಂಬಂಧಿಗಳ ಸಮ್ಮುಖದಲ್ಲಿ ಕೊಠಡಿ ಬಾಗಿಲು ಒಡೆದು ನೋಡಿದಾಗ ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ರಂಜಿತಾ ಶವ ಪತ್ತೆಯಾಗಿದೆ.
ಇದನ್ನೂ ಓದಿ:
ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ತಂದೆ ನಿಂಗಪ್ಪ, ಮೂರು ಅಡಿ ಕಿಟಕಿಗೆ ವೇಲ್ ನಲ್ಲಿ ನೇಣು ಹಾಕಿಕೊಳ್ಳಲು ಹೇಗೆ ಸಾಧ್ಯ. ಕಾಲಿಗೆ ಒಂದು ಮುಳ್ಳು ಚುಚ್ಚಿದರೂ ನನ್ನ ಬಳಿ ಮಗಳು ಹೇಳುತ್ತಿದ್ದಳು. ಹಾಸ್ಟೆಲ್ ಬಳಿ ನಾನು ಹೋದರೆ ಓಡಿ ಬಂದು ತಬ್ಬಿಕೊಳ್ಳುತ್ತಿದ್ದಳು. ಬುಧವಾರ ಬೆಳಿಗ್ಗೆ ತಾಯಿ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದಾಳೆ. ನಮಗೆ ಸಂಜೆ ಟೀಂ ಅಕಾಡೆಮಿಯವರು ಫೋನ್ ಮಾಡಿ, ವಿಷಯ ತಿಳಿಸಿದರು. ಮಗಳು ರಂಜಿತಾ ಸಾವಿನ ಬಗ್ಗೆ ಅನುಮಾನವಿದೆ. ನನ್ನ ಮಗಳಿಗೆ ಕಾಲೇಜಿನವರೇ ಏನೋ ಮಾಡಿದ್ದಾರೆ. ಮಗಳ ಸಾವಿಗೆ ನ್ಯಾಯ ಬೇಕು. ರಂಜಿತಾ ಸಾವಿನ ಬಗ್ಗೆ ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಟೀಂ ಅಕಾಡೆಮಿ ಕಾಲೇಜು ಅಧ್ಯಕ್ಷ ಕೆ.ಎಂ.ಮಂಜಪ್ಪ ಪ್ರತಿಕ್ರಿಯಿಸಿ, ಊರಿನಿಂದ ಬಂದಾಗಿನಿಂದ ರಂಜಿತಾ ಖಿನ್ನತೆಯಲ್ಲಿದ್ದಳೆಂಬ ಮಾಹಿತಿ ಇತ್ತು. ರಂಜಿತಾ ತಂದೆ ಕಳಿಸಿಕೊಟ್ಟಿದ್ದ ದಾವಣಗೆರೆಯಲ್ಲಿದ್ದ ಸಂಬಂಧಿ ಸಮ್ಮುಖದಲ್ಲೇ ಬಾಗಿಲು ಒಡೆದು ನೋಡಿದಾಗ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಹಾಸ್ಟೆಲ್ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮೃತಳ ತಂದೆ, ತಾಯಿ ನೋವಿನಲ್ಲಿರುವುದರಿಂದ ಆರೋಪ ಮಾಡುತ್ತಿದ್ದಾರೆ. ತನಿಖೆ ನಡೆದರೆ ಸತ್ಯ ಏನೆಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.



