ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಆಗ್ರಾದಲ್ಲಿ ಅತ್ಯಂತ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೇಶಾದ್ಯಂತ ಸದ್ದು ಮಾಡಿದ್ದ ಸೋನಂ ಮತ್ತು ಸಿಯಾ ಪ್ರಕರಣದ ಬೆನ್ನಲ್ಲೇ, ಇಲ್ಲೊಬ್ಬಳು ಪತ್ನಿಯೇ ತನ್ನ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಮನೆಯ ಬಾತ್‌ರೂಂ ನೆಲದಡಿ ಹೂತು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರ ದಿಕ್ಕು ತಪ್ಪಿಸಲು ನಾಪತ್ತೆ ನಾಟಕ!
ಆರೋಪಿ ಪತ್ನಿ ರೂಬಿ ಶರ್ಮಾ, ತನ್ನ ಪತಿ ಸುರೇಂದ್ರ ಶರ್ಮಾ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ದೂರು ನೀಡಿದ್ದಳು. ಅಷ್ಟೇ ಅಲ್ಲದೆ, ತನಿಖೆಯ ವೇಳೆ ಪೊಲೀಸರೊಂದಿಗೆ ಸೇರಿ ಪತಿಯನ್ನು ಹುಡುಕುವ ನಾಟಕವಾಡಿದ್ದಳು. ನೆರೆಹೊರೆಯವರ ಮುಂದೆ ಕಣ್ಣೀರು ಹಾಕುತ್ತಾ ಎಲ್ಲರ ಸಹಾನುಭೂತಿ ಗಳಿಸಲು ಯತ್ನಿಸಿದ್ದಳು.
ಸಹೋದರರ ಅನುಮಾನ, ಖೆಡ್ಡಾಕ್ಕೆ ಬಿದ್ದ ಪತ್ನಿ
ಆದರೆ, ಪತಿ ನಾಪತ್ತೆಯಾದ ದಿನದ ಬಗ್ಗೆ ರೂಬಿ ನೀಡುತ್ತಿದ್ದ ಹೇಳಿಕೆಗಳಲ್ಲಿ ಪದೇ ಪದೇ ಗೊಂದಲಗಳಿದ್ದವು. ಇದರಿಂದ ಅನುಮಾನಗೊಂಡ ಸುರೇಂದ್ರ ಅವರ ಸಹೋದರರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ರೂಬಿ 45 ದಿನಗಳ ಬಳಿಕ ಸತ್ಯ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿ, ಶವವನ್ನು ಹೊರತೆಗೆದಿದ್ದು ತನಿಖೆ ಮುಂದುವರಿಸಿದ್ದಾರೆ.



