ಬೆಳಗ್ಗಿನ ಜಿಮ್ ವರ್ಕೌಟ್ ಆರಂಭಿಸುವ ಮುನ್ನ ಹೊಟ್ಟೆಗೆ ಏನಾದರೂ ತಿನ್ನುವುದು ಅತ್ಯಂತ ಮುಖ್ಯ. ಆದರೆ ಹಾದಿ ತಪ್ಪಿದ ಆಹಾರ ಸೇವನೆ ಅಥವಾ ಖಾಲಿ ಹೊಟ್ಟೆಯಲ್ಲಿ ಭಾರೀ ವ್ಯಾಯಾಮ ಮಾಡುವುದು ದೇಹಕ್ಕೆ ಹಾನಿ ಮಾಡಬಹುದು. ಈ ಹಿನ್ನೆಲೆಯಲ್ಲಿ, ಜಿಮ್‌ಗೆ ಹೋಗುವ ಮುನ್ನ ಹಣ್ಣುಗಳನ್ನು ಸೇವಿಸುವುದು ಅತ್ಯುತ್ತಮ ಆರೋಗ್ಯಕರ ಆಯ್ಕೆಯಾಗಿದೆ.
ರಾತ್ರಿ ಪೂರ್ತಿ ನಿದ್ರಿಸಿ ಎದ್ದಾಗ ನಮ್ಮ ದೇಹದಲ್ಲಿ ಗ್ಲುಕೋಸ್ ಮಟ್ಟ ಕಡಿಮೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಜಿಮ್‌ಗೆ ಹೋದರೆ ನಿಮಗೇ ಆಯಾಸ ಕಾಡುತ್ತದೆ. ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆ ಯಾವುದೇ ಅಡ್ಡಪರಿಣಾಮವಿಲ್ಲದೆ ದೇಹಕ್ಕೆ ಕ್ಷಣಾರ್ಧದಲ್ಲಿ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ನಿಮ್ಮ ವ್ಯಾಯಾಮದ ಸಾಮರ್ಥ್ಯ ಹೆಚ್ಚುತ್ತದೆ.
ಜಿಮ್‌ಗೆ ಹೋಗುವ ಮುನ್ನ ಅತಿಯಾದ ಆಹಾರ ಸೇವಿಸಿದರೆ ಹೊಟ್ಟೆ ಭಾರ ಅನಿಸುವುದು ಅಥವಾ ವಾಕರಿಕೆ ಬರುವುದು ಸಹಜ. ಆದರೆ ಹಣ್ಣುಗಳು ಅತ್ಯಂತ ಸುಲಭವಾಗಿ ಜೀರ್ಣವಾಗುತ್ತವೆ. ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಭಾರ ಹಾಕದೆ ನೇರವಾಗಿ ನಿಮ್ಮ ಸ್ನಾಯುಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ತಲುಪಿಸುತ್ತೆ.
ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡಿದಾಗ ದೇಹವು ಶಕ್ತಿಗಾಗಿ ಸ್ನಾಯುಗಳಲ್ಲಿರುವ ಪ್ರೊಟೀನ್ ಅನ್ನು ಬಳಸಿಕೊಳ್ಳಲು ಆರಂಭಿಸುತ್ತದೆ. ಇದರಿಂದ ಸ್ನಾಯುಗಳು ಸಡಿಲಗೊಳ್ಳುವ ಅಪಾಯವಿರುತ್ತದೆ. ಜಿಮ್‌ಗೆ ಅರ್ಧ ಗಂಟೆ ಮುನ್ನ ಬಾಳೆಹಣ್ಣು ಅಥವಾ ಸೇಬು ತಿಂದರೆ ಸ್ನಾಯುಗಳು ಕರಗುವುದನ್ನು ತಡೆಗಟ್ಟಿ, ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬೆಳಗ್ಗಿನ ಸಮಯದಲ್ಲಿ ದೇಹವು ಸ್ವಲ್ಪ ಮಟ್ಟಿಗೆ ನಿರ್ಜಲೀಕರಣಗೊಂಡಿರುತ್ತದೆ. ನೀರಿನಂಶ ಹಾಗೂ ವಿಟಮಿನ್‌ಗಳಿಂದ ಕೂಡಿರುವ ಹಣ್ಣುಗಳನ್ನು (ಉದಾಹರಣೆಗೆ: ಕಲ್ಲಂಗಡಿ, ಕಿತ್ತಳೆ) ಸೇವಿಸುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳಲು ಮತ್ತು ಬೆವರು ಹರಿಸುವಾಗ ಸೆಳೆತ ಉಂಟಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ.



