ಡ್ರೈ ಫ್ರೂಟ್ಸ್ ಲಾಡು ಎನ್ನುವುದು ಸಕ್ಕರೆ ಅಥವಾ ಬೆಲ್ಲ ಇಲ್ಲದೆ, ಕೇವಲ ಒಣಹಣ್ಣುಗಳಿಂದ ಮಾಡುವ ಅತ್ಯಂತ ಆರೋಗ್ಯಕರ ಸಿಹಿಯಾಗಿದೆ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳನ್ನು ಹುರಿದು, ಮೃದುವಾದ ಖರ್ಜೂರದ ಜೊತೆ ಸೇರಿಸಿ ಈ ಲಾಡನ್ನು ಸುಲಭವಾಗಿ ತಯಾರಿಸಲಾಗುತ್ತದೆ. ಇದರಲ್ಲಿ ನೈಸರ್ಗಿಕ ಸಿಹಿ ಇರುವುದರಿಂದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಇದು ಶಕ್ತಿ ನೀಡುವ ಅತ್ಯುತ್ತಮವಾದ ಹೆಲ್ತಿ ಸ್ನ್ಯಾಕ್.
ಬೇಕಾಗುವ ಸಾಮಗ್ರಿಗಳು
ಖರ್ಜೂರ
ಬಾದಾಮಿ
ಗೋಡಂಬಿ
ಪಿಸ್ತಾ
ಒಣದ್ರಾಕ್ಷಿ
ಗಸಗಸೆ
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ
ಮೊದಲು ಬೀಜ ತೆಗೆದ ಮೃದುವಾದ ಖರ್ಜೂರವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ. ನೀರು ಸೇರಿಸದೆ ತರಿತರಿಯಾಗಿ ರುಬ್ಬಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಹಾಕಿ. ಸಣ್ಣ ಉರಿಯಲ್ಲಿಇವುಗಳು ಗರಿಗರಿಯಾಗಿ ಮತ್ತು ತಿಳಿ ಹೊಂಬಣ್ಣ ಬರುವವರೆಗೆ 3-4 ನಿಮಿಷ ಚೆನ್ನಾಗಿ ಹುರಿದು ಒಂದು ತಟ್ಟೆಗೆ ತಗೆದಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಮತ್ತೊಂದು ಚಮಚ ತುಪ್ಪ ಹಾಕಿ ಒಣದ್ರಾಕ್ಷಿ ಮತ್ತು ಗಸಗಸೆಯನ್ನು ಹಾಕಿ. ದ್ರಾಕ್ಷಿ ಚೆನ್ನಾಗಿ ಉಬ್ಬುವವರೆಗೆ ಹುರಿದು, ಇದನ್ನು ಕೂಡ ಅದೇ ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು.
ಈಗ ಬಾಣಲೆಗೆ 1 ಚಮಚ ತುಪ್ಪ ಹಾಕಿ, ರುಬ್ಬಿಟ್ಟುಕೊಂಡ ಖರ್ಜೂರದ ಪೇಸ್ಟ್ ಅನ್ನು ಸೇರಿಸಿ. ಸಣ್ಣ ಉರಿಯಲ್ಲಿ ಚಮಚದಿಂದ 2-3 ನಿಮಿಷ ಕೈಯಾಡಿಸಿ. ಬಿಸಿಗೆ ಖರ್ಜೂರವು ಸಂಪೂರ್ಣವಾಗಿ ಜಿಗುಟಾಗಿ, ಮೃದುವಾದ ಉಂಡೆಯಂತಾಗುತ್ತದೆ. ಖರ್ಜೂರ ಮೃದುವಾದ ತಕ್ಷಣ, ಹುರಿದು ಇಟ್ಟುಕೊಂಡ ಎಲ್ಲಾ ಒಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಪುಡಿಯನ್ನು ಬಾಣಲೆಗೆ ಹಾಕಿ. ಖರ್ಜೂರದ ಪೇಸ್ಟ್ ಎಲ್ಲಾ ಒಣಫಲಗಳ ಜೊತೆ ಚೆನ್ನಾಗಿ ಒಂದಾಗುವಂತೆ ಚಮಚದಿಂದ ಸರಿಯಾಗಿ ಕಲಸಿ. ಈಗ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು, ಮಿಶ್ರಣದಿಂದ ಸ್ವಲ್ಪ ಸ್ವಲ್ಪವೇ ಭಾಗವನ್ನು ತೆಗೆದುಕೊಂಡು ಗಟ್ಟಿಯಾಗಿ ಒತ್ತುತ್ತಾ ದುಂಡಗಿನ ಲಾಡುಗಳನ್ನು ಕಟ್ಟಿದರೆ ಆರೋಗ್ಯಕರವಾದ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧ!



